ಟಾಪ್ 3 ನ್ಯೂಸ್ ತೀರ್ಥಹಳ್ಳಿ
– ತೀರ್ಥಹಳ್ಳಿ ಪಟ್ಟಣದ ಹಳೆ ಕಟ್ಟಡಗಳು ಮಾಯ!
– ತೀರ್ಥಹಳ್ಳಿ ಪಟ್ಟಣ ಸಮೀಪವೇ ಚಿರತೆ ಮರಿಗಳು ಪ್ರತ್ಯಕ್ಷ!
– ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ 3 ಬಸ್ ಸೇವೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಚಿರತೆ ಹೆಚ್ಚಿವೆ. ಕಳೆದೆರಡು ದಿನಗಳ ಹಿಂದೆ ಮೇಲಿನಕುರುವಳ್ಳಿಯ ಮುಖ್ಯರಸ್ತೆಯ ಪಕ್ಕದಲ್ಲೇ ಎರಡು ಚಿರತೆ ಮರಿಗಳು ಬಿಸಿಲಿಗೆ ಕುಳಿತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಈ ದೃಶ್ಯಾವಳಿಯು ಹರಿದಾಡಿದೆ. ಅಲ್ಲದೆ ಚಿಟ್ಟೇಬೈಲು ಮತ್ತು ಯಡಗುಡ್ಡೆ ಭಾಗದ ಆಸುಪಾಸಿನಲ್ಲಿಯೂ ಕೂಡ ಚಿರತೆ ಮರಿಗಳು ಪ್ರತಿದಿನ ಕಾಣಸಿಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದ್ದಾರೆ.
ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ 3 ಬಸ್ ಸೇವೆ
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ ದಿನಕ್ಕೆ ಮೂರು ಸರ್ಕಾರಿ ಬಸ್ ಸೇವೆ ಲಭ್ಯವಾಗುವಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಕಳೆದ ತಿಂಗಳು ಹುಲಿಕಲ್ ಘಾಟಿ ಮಣ್ಣು ಕುಸಿತದ ದುರಂತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ ಅವರಿಗೆ ಅಲ್ಲಿನ ಜನರು ಬಸ್ ವ್ಯವಸ್ಥೆಯ ಕುರಿತು ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿರುವ ಸಚಿವರು ಈ ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದರು.ಈ ಹಿನ್ನೆಲೆಯಲ್ಲಿ ಮೇ 4ರ ಸೋಮವಾರದಿಂದ ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ ಮೂರು ಸರ್ಕಾರಿ ಬಸ್ ಗಳಿಗೆ ಚಾಲನೆ ದೊರೆತಿದ್ದು, ಇದು ತೀರ್ಥಹಳ್ಳಿ-ಕೈಮರ- ಯಡೂರು-ಮಾಸ್ತಿಕಟ್ಟೆ ಮಾರ್ಗವಾಗಿ ಹುಲಿಕಲ್(ಬಾಳೆಬರ) ಚಂಡಿಕಾಂಬ ದೇವಸ್ಥಾನದವರೆಗೆ ದಿನಕ್ಕೆ ಮೂರು ಬಾರಿ ಸಂಚರಿಸಲಿದೆ ಎನ್ನುವ ಮಾಹಿತಿ ಲಭಿಸಿದೆ.
ತೀರ್ಥಹಳ್ಳಿ ಪಟ್ಟಣದ ಹಳೆ ಕಟ್ಟಡಗಳು ಮಾಯ!
ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಕೊಪ್ಪ ಸರ್ಕಲ್ ಇಂದ ಭಾರತೀಪುರವರೆಗೆ ಈಗಾಗಲೇ ರಸ್ತೆ ಕಾಮಗಾರಿ ಶುರುವಾಗಿದೆ. ಇದರಿಂದ ಹಳೆ ಕಟ್ಟಡಗಳನ್ನು ಎಲ್ಲೆಡೆ ಒಡೆಯಲಾಗಿದೆ. ಜತೆಗೆ ದೊಡ್ಡ ದೊಡ್ಡ ಮರಗಳು ಕೂಡ ಧರೆ ಶಾಹಿಯಾಗಿವೆ. ಈ ಹಿನ್ನೆಲೆಯಲ್ಲಿ ಹಳೆ ತೀರ್ಥಹಳ್ಳಿ ಮಾಯವಾಗಿದೆ. ಎಲ್ಲೆಡೆ ಸುಡು ಬಿಸಿಲು ಕಾಣುತ್ತಿದೆ.








