ಟಾಪ್ 4 ನ್ಯೂಸ್ ಶಿವಮೊಗ್ಗ
ಶಿವಮೊಗ್ಗ : ಕಾರು ಚಲಾಯಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು..!!
– ಶಿವಮೊಗ್ಗ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಯುವಕನಿಗೆ 20 ವರ್ಷ ಜೈಲು ಶಿಕ್ಷೆ..!!
– ಶಿವಮೊಗ್ಗ : ವಾಟ್ಸಪ್ ವಿಡಿಯೋ ಕಾಲ್ ನಿಂದ ₹19 ಲಕ್ಷ ವಂಚನೆ..!!
– ಶಿವಮೊಗ್ಗ : 30 ಲಕ್ಷ ಆಸೆಗೆ ಬ್ಯಾಂಕ್ ಖಾತೆ ನಂಬರ್ ಕೊಟ್ಟ ಮಹಿಳೆ..!
NAMMUR EXPRESS NEWS
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲೇ ಹೃದಯಾಘಾತವಾಗಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯಲ್ಲಿ ಘಟನೆ ಸಂಭವಿಸಿದೆ.
ಹುಡ್ಕೊ ಕಾಲೋನಿ ನಿವಾಸಿ ಮಲ್ಲಿಕಾರ್ಜುನ (45) ಮೃತರು. ಕಾರು ಚಲಾಯಿಸುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೆ ಅವರು ಆಸ್ಪತ್ರೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
– ಶಿವಮೊಗ್ಗ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಯುವಕನಿಗೆ 20 ವರ್ಷ ಜೈಲು ಶಿಕ್ಷೆ..!!
ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ವಿವಾಹವಾಗಿದ್ದ 19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 19 ವರ್ಷದ ಯುವಕನೊಬ್ಬ 2022ರಲ್ಲಿ ಭದ್ರಾವತಿ ತಾಲೂಕಿನ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮದುವೆಯಾಗಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ತನಿಖೆ ನಡೆಸಿದ ಆಗಿನ ಇನ್ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎಫ್ಟಿಎಸ್ಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಯುವಕನಿಗೆ ಪೋಕ್ಸೋ ಕಾಯ್ದೆ ಸೆಕ್ಷನ್ 6ರ ಪ್ರಕಾರ 20 ವರ್ಷ ಜೈಲು ಶಿಕ್ಷೆ, ₹50,000 ದಂಡ ವಿಧಿಸಿದ್ದಾರೆ. ಆರೋಪಿಯಿಂದ ₹80,000 ದಂಡದ ಮೊತ್ತವನ್ನು ನೊಂದ ಬಾಲಕಿಗೆ ನೀಡಬೇಕು. ಇನ್ನು, ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ₹4 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀಧರ್.ಹೆಚ್.ಆರ್ ವಾದ ಮಂಡಿಸಿದ್ದರು.
– ಶಿವಮೊಗ್ಗ : ವಾಟ್ಸಪ್ನಲ್ಲಿ ವಿಡಿಯೋ ಕಾಲ್ ನಿಂದ ₹19 ಲಕ್ಷ ವಂಚನೆ..!!
ಶಿವಮೊಗ್ಗ: ಡಿಜಿಟಲ್ ಅರೆಸ್ಟ್ ಮಾಡಿ ಜನರಲ್ಲಿ ಆತಂಕ ಮೂಡಿಸಿ ಹಣ ವಸೂಲಿ ಮಾಡುತ್ತಿದ್ದ ಆನ್ಲೈನ್ ವಂಚಕರು ಈಗ ವಂಚನೆಯ ಸ್ವರೂಪ ಬದಲಿಸಿದ್ದಾರೆ. ವಿಡಿಯೋ ಕಾಲ್ನಲ್ಲೇ ಅರೆಸ್ಟ್ ಮಾಡಿ, ವಿಡಿಯೋ ಕಾಲ್ನಲ್ಲೇ ಬೇಲ್ ಕೊಡಿಸಿ ಹಣ ಪಡೆದು ವಂಚಿಸುತ್ತಿದ್ದಾರೆ. ಇಂತಹುದೇ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹19 ಲಕ್ಷ ವಂಚಿಸಲಾಗಿದೆ. ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರನ್ನು ಗುರಿಯಾಗಿಸಿ ವಾಟ್ಸಪ್ನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಮುಂಬೈನ ಕೊಲಾಬ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿಖಾವತ್ ಎಂದು ಆತ ಪರಿಚಿಯಿಸಿಕೊಂಡಿದ್ದ. ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ಹಾಗಾಗಿ ಈ ಕೂಡಲೆ ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಮರುದಿನ ಪುನಃ ವಿಡಿಯೋ ಕಾಲ್ ಮಾಡಿ ನ್ಯಾಯಾಲಯದಲ್ಲಿ ನಿಮಗೆ ಜಾಮೀನು ಕೊಡಿಸುತ್ತೇವೆ ಎಂದು ನಂಬಿಸಿದ್ದ. ಮತ್ತೊಂದು ವಿಡಿಯೋ ಕರೆಯಲ್ಲಿ ಕೋರ್ಟ್ ಮಾದರಿ ಹಿನ್ನಲೆ, ನ್ಯಾಯಾಧೀಶರೊಬ್ಬರು ಕುಳಿತಿರುವಂತಿತ್ತು. ನ್ಯಾಯಾಧೀಶನಂತಿದ್ದ ವ್ಯಕ್ತಿ ಶಿವಮೊಗ್ಗದ ನಿವೃತ್ತ ಉದ್ಯೋಗಿಯ ಮಾಹಿತಿ ಕೇಳಿದ. ತದನಂತರ ₹19 ಲಕ್ಷ ಕೊಡಬೇಕು ಎಂದು ಬೆದರಿಸಿದ್ದಾರೆ. ಆತಂಕದಲ್ಲಿ ನಿವೃತ್ತ ಉದ್ಯೋಗಿಯು ಬ್ಯಾಂಕ್ನಲ್ಲಿ ಚಿನ್ನದ ಮೇಲೆ ಸಾಲ ಪಡೆದು ವಂಚಕರು ಹೇಳಿದ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವ ಅರಿವಾಗಿದ್ದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : 30 ಲಕ್ಷ ಆಸೆಗೆ ಬ್ಯಾಂಕ್ ಖಾತೆ ನಂಬರ್ ಕೊಟ್ಟ ಮಹಿಳೆ..!
ಶಿವಮೊಗ್ಗ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಸದಾ ಇರುತ್ತಾರೆ ಎಂಬ ಮಾತು ಪ್ರಸ್ತುತ ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿ ಸತ್ಯವಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 30 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಬಲಿಯಾಗಿ 3,71,400 ರೂಪಾಯಿಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಲೋಗೋವನ್ನು ಹಾಕಿಕೊಂಡು, ತಾನು ಬ್ಯಾಂಕ್ ವ್ಯವಸ್ಥಾಪಕ (ಮ್ಯಾನೇಜರ್) ಎಂದು ಪರಿಚಯಿಸಿಕೊಂಡಿದ್ದಾನೆ. ಆತ ಸಂದೇಶ ಕಳುಹಿಸಿ, “ನೀವು 30 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆದ್ದಿದ್ದೀರಿ” ಎಂದು ನಂಬಿಸಿದ್ದಾನೆ. ಈ ಸಂದೇಶದಿಂದ ಸಂತೋಷಗೊಂಡ ಮಹಿಳೆ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದಾರೆ. ತದನಂತರ, ಆ ಅಪರಿಚಿತ ವ್ಯಕ್ತಿ “ನಿಮ್ಮ ಖಾತೆಗೆ ಬಹುಮಾನದ ಹಣವನ್ನು ವರ್ಗಾಯಿಸಲು ಖಾತೆ ಸಂಖ್ಯೆಯನ್ನು ನೀಡಿ” ಎಂದು ಹೇಳಿ ಮಹಿಳೆಯನ್ನು ನಂಬುವಂತೆ ಮಾಡಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ತಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ. ನಿಮ್ಮ ಖಾತೆಗೆ ಲಾಟರಿ ಹಣವನ್ನು ವರ್ಗಾವಣೆ ಮಾಡಬೇಕಾದರೆ, ಅದಕ್ಕೆ ಸರ್ವಿಸ್ ಶುಲ್ಕ (ಸರ್ವರ್ ಚಾರ್ಜ್), ತೆರಿಗೆ (ಟ್ಯಾಕ್ಸ್) ಮತ್ತು ಇತರೆ ಕಾರಣಗಳನ್ನು ನೀಡಿ” ಒಟ್ಟು 3,71,400 ರೂಪಾಯಿಗಳ ಹಣವನ್ನು ಹಂತ ಹಂತವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ವಂಚನೆಗೆ ಒಳಗಾದ ಮಹಿಳೆ ತಡಮಾಡದೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.






