ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ನೀಡಿದೆ.
ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿನ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಒಟ್ಟು ಬಾಕಿ ಇರುವ 11.403 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 1414 ಹುದ್ದೆಗಳು ಭರ್ತಿಯಾಗಲಿವೆ ಎನ್ನುವ ಮಾಹಿತಿ ಲಭಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ವಾರು ಪ್ರಕಾರ ಬ್ಯಾಂಕ್ ಆಫ್ ಬರೋಡಾದಲ್ಲಿ 180 ಹುದ್ದೆಗಳು, ಬ್ಯಾಂಕ್ ಆಫ್ ಇಂಡಿಯಾದಲ್ಲಿ 40 ಹುದ್ದೆಗಳು, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 17 ಹುದ್ದೆಗಳು, ಕೆನರಾ ಬ್ಯಾಂಕ್ ನಲ್ಲಿ 800 ಹುದ್ದೆಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 29 ಹುದ್ದೆಗಳು, ಇಂಡಿಯನ್ ಬ್ಯಾಂಕ್ ನಲ್ಲಿ 40 ಹುದ್ದೆಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 61 ಹುದ್ದೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 234 ಹುದ್ದೆಗಳು ಮತ್ತು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ನಲ್ಲಿ 5 ಹುದ್ದೆಗಳು ಬಾಕಿ ಉಳಿದಿವೆ. ಈ ಹುದ್ದೆಗಳಿಗೆ ಅಕ್ಟೋಬರ್ ತಿಂಗಳ 10 ಮತ್ತು 11ರಂದು ಪೂರ್ವಭಾವಿ ಪರೀಕ್ಷೆಗಳು ನಡೆಯಲಿದ್ದು, ಡಿಸೆಂಬರ್ 27ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಮಾರ್ಚ್ 2027ರಂದು ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
ಎಸ್ ಸಿ/ಎಸ್ ಟಿ/ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ಹಾಗೂ ಸಾಮಾನ್ಯ ಮತ್ತು ಇತರ ವರ್ಗಗಳ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2026.







