ಜೀವರಾಜ್ ವಿರುದ್ಧ ಎಫ್ಐರ್: ಹೈಕೋರ್ಟ್ ತಡೆ!
– ಮತ್ತೆ ರಾಜೇಗೌಡರಿಗೆ ಸೋಲು: ಮುಂದೇನಾಗುತ್ತೆ?
– ಜೀವರಾಜ್ ಅಭಿಮಾನಿಗಳ ಸಂತಸ
ಶೃಂಗೇರಿ: ಅಂಚೆ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದ ರಾಜೇಗೌಡ ಅವರಿಗೆ ಕೋರ್ಟ್ ಅಲ್ಲಿ ಮತ್ತೊಂದು ಹಿನ್ನಡೆ ಆಗಿದೆ. ಡಿ.ಎನ್.ಜೀವರಾಜ್ ಅವರು ಮತಪತ್ರಗಳನ್ನು ತಿದ್ದಿರುವ ಆರೋಪದ ಬಗ್ಗೆ ದಾಖಲಾಗಿದ್ದ ದೂರು ಹೈಕೋರ್ಟ್ ಅಲ್ಲಿ ವಜಾಗೊಂಡಿದೆ. ಶನಿವಾರದಂದು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಚೆ ಮತ ಮರು ಎಣಿಕೆ ನಡೆದಿದ್ದು, ಡಿ.ಎನ್.ಜೀವರಾಜ್ ಅವರ ವಿರುದ್ಧ ಮತಪತ್ರಗಳನ್ನು ತಿದ್ದಿರುವ ಆರೋಪ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ವೇದಮೂರ್ತಿ, ಜೀವರಾಜ್ ಮತ್ತು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಏಜೇಂಟ್ ಆಗಿದ್ದ ಸುಧೀರ್ ಕುಮಾರ್ ಮುರೊಳ್ಳಿ ಅವರು ಎಫ್ಐಆರ್ ದಾಖಲಿಸಿದ್ದರು.
ಡಿ.ಎನ್.ಜೀವರಾಜ್ ಅವರು ವಿಜೇತರಾಗಿರುವ ಸಂಗತಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಮತ ಎಣಿಕೆ ಏಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರು ಮತಪತ್ರ ತಿದ್ದಿರುವ ಕುರಿತು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.ಆದರೆ ಈ ವಿಚಾರವಾಗಿ ಕಾಂಗ್ರೆಸ್ ಗೆ ಮತ್ತೊಮ್ಮೆ ಮುಖಭಂಗವಾಗಿದ್ದು, ಮೂವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ವಿಧಿಸಿದೆ. ಅಲ್ಲದೆ ಈ ಪ್ರಕರಣದ ಮುಂದಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ನಡೆಯಲಿವೆ ಎನ್ನುವ ಸಂಗತಿ ತಿಳಿದುಬಂದಿದೆ.








