ಕಾಫಿ ನಾಡಿನ ಅರುಣ್ ಬಿನ್ನಡಿಗೆ ಬಂಗಾಳದಲ್ಲಿ ಮ್ಯಾಜಿಕ್!
– ಪಶ್ಚಿಮ ಬಂಗಾಳದಲ್ಲಿ ಹಲವು ಕ್ಷೇತ್ರಗಳ ಉಸ್ತುವಾರಿಯಾಗಿ ಗೆಲುವು
– ಪಕ್ಷ, ಸಂಘಟನೆ ಮೂಲಕ ಬಂಗಾಳ ಗೆಲುವಲ್ಲಿ ಶ್ರಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ದಾಖಲೆ ಮಾಡಿದೆ. ದೀದಿ ಆಡಳಿತಕ್ಕೆ ಬ್ರೇಕ್ ಹಾಕಿ ಹೊಸ ಅಲೆ ಸೃಷ್ಟಿ ಮಾಡಿದೆ. ಈ ಚುನಾವಣೆಯಲ್ಲಿ ಕಾಫಿ ನಾಡಿನ ಯುವಕನೊಬ್ಬ ಈ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಬಿಜೆಪಿ ಪೂರ್ಣಾವಧಿ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಲದ ಅರುಣ್ ಬಿನ್ನಡಿ ಅವರಿಗೆ ಉತ್ತರ ಬಂಗಾಳದ ಕೂಚ್ ಬೆಹಾರ್, ಅಲಿಪುರ್ ದ್ವಾರ್, ಡಾರ್ಜಿಲಿಂಗ್ ಸೇರಿದಂತೆ ಹಲವು ಜಿಲ್ಲೆಗಳ 28 ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರುಣ್ ಬಿನ್ನಡಿ ಅವರು ಕಳೆದ ಆರು ತಿಂಗಳಿನಿಂದ ಉತ್ತರ ಬಂಗಾಳದಲ್ಲಿಯೇ ಬೀಡುಬಿಟ್ಟಿದ್ದರು. ಇದೀಗ ಅವರ ಉಸ್ತುವಾರಿಯ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.
ಪಕ್ಷ, ಜನ ಸಂಘಟನೆ ಸೇವೆ
ಅರುಣ್ ಬಿನ್ನಡಿ ಅವರು ಪ್ರತಿದಿನ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತಾ, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಇದಕ್ಕೂ ಮೊದಲು ಅರುಣ್ ಅವರು ಬೆಂಗಳೂರು ಯುವ ಮೋರ್ಚಾ ಯಶವಂತಪುರ ಘಟಕದ ಕಾರ್ಯದರ್ಶಿಯಾಗಿ,’ಸಿವಿಕ್ ಇನಿಶಿಯೇಟಿವ್ ಫಾರ್ ಬೆಟರ್ ಬೆಂಗಳೂರು’ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ಜೊತೆಗೆ ಅಣ್ಣಾ ಹಜಾರೆ ಆಂದೋಲನದಲ್ಲೂ ಭಾಗಿಯಾಗಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ದೆಹಲಿಯಲ್ಲಿ ಕೆಲಸ ಮಾಡಿದ್ದರು. ಜಮ್ಮು ಕಾಶ್ಮೀರ, ಪಂಜಾಬ್ ಚುನಾವಣೆ ಸಂದರ್ಭದಲ್ಲೂ ಸಂಘಟನೆಯ ಪರವಾಗಿ ದುಡಿದಿದ್ದಾರೆ.
ಅರುಣ್ ಮೇಲೆ ಟಿಎಂಸಿ ಕಾರ್ಯಕರ್ತರ ಕೆಂಗಣ್ಣು, ದಾಳಿ!
ಅರುಣ್ ಅವರ ಮೇಲೆ ಟಿಎಂಸಿ ಕಾರ್ಯಕರ್ತರ ಕೆಂಗಣ್ಣು ಬಿದ್ದಿದ್ದು, ಎರಡು ಬಾರಿ ದಾಳಿಗೂ ಪ್ರಯತ್ನ ನಡೆಸಿದ್ದಾರೆ. ಹೊಸ ಜವಾಬ್ದಾರಿಯ ಕುರಿತು ಅರುಣ್ ಬಿನ್ನಡಿ ಅವರು ಸಂಘರ್ಷಮಯ ರಾಜಕೀಯ ವಾತಾವರಣವಿರುವ ಬಂಗಾಳದಲ್ಲಿ ಟಿಎಂಸಿಯ ಸವಾಲುಗಳಿಗೆ ಮೈಯೊಡ್ಡುತ್ತಾ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಬಂಗಾಳದಲ್ಲಿ ಬಿಜೆಪಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.








