ಶೃಂಗೇರಿ ಮರು ಎಣಿಕೆ: ಮತ್ತೆ ಗೆದ್ದ ರಾಜೇಗೌಡ!
– ಕಾಂಗ್ರೇಸ್ ನ ರಾಜೇಗೌಡರಿಗೆ ಗೆಲುವಿನ ಅಂತರ ಹೆಚ್ಚಳ
– ಕಾಂಗ್ರೆಸ್ ಅಭಿಮಾನಿಗಳ ಸಂತಸ: ಜೀವರಾಜ್ ಹಿನ್ನಡೆ
ಕೊಪ್ಪ: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಜಯಗಳಿಸಿದ್ದಾರೆ. ಮತ್ತೆರಡು ಮತಗಳನ್ನು ಹೆಚ್ಚಿಸಿಕೊಂಡು ಬೀಗಿದ್ದಾರೆ. 2023ರ ಚುನಾವಣೆಯಲ್ಲಿ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕೋರ್ಟ ಆದೇಶದಂತೆ 1,822 ಅಂಚೆ ಮತಗಳ ಮರು ಪರಿಶೀಲನೆ ಚಿಕ್ಕಮಗಳೂರಿನ ಐಡಿಎಸ್ಜಿ (IDSG) ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಪ್ರಕ್ರಿಯೆ ನಡೆಯಿತು. ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳನ್ನು ಮರು ಪರಿಶೀಲಿಸಲಾಯಿತು. ಈ ಪೈಕಿ ಈ ಹಿಂದೆ ತಿರಸ್ಕೃತಗೊಂಡಿದ್ದ 279 ಮತಗಳನ್ನು ಚುನಾವಣಾಧಿಕಾರಿಗಳು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ ಮತ್ತೆರಡು ಮತಗಳು ಸರಿ ಇರುವುದನ್ನು ಗಮನಿಸಿ ಅದೆರಡು ಮತವನ್ನು ಎಣಿಕೆಗೆ ಪರಿಗಣಿಸಿದರು, ಅಂತಿಮವಾಗಿ ಕಾಂಗ್ರೆಸ್ ನ ರಾಜೇಗೌಡರು ಇನ್ನೆರಡು ಹೆಚ್ವುವರಿ ಮತಗಳಿಂದ ಜಯಗಳಿಸಿದರು. ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಮುಗಿಲುಮುಟ್ಟಿತ್ತು.








