ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಯಕ್ಷಗಾನ ಕಲಾವಿದರ, ಹೆತ್ತವರ ಅವಹೇಳನ; ತಿಮರೋಡಿ ಅರ್ಜಿ ವಜಾ
• ಮಂಗಳೂರು: ಚಿಪ್ಪುಹಂದಿ ಮಾರಾಟಕ್ಕೆ ಯತ್ನ; ಮೂವರ ಬಂಧನ
• ಬೈಂದೂರು: ನಗದು ಹಣ ಕಳುವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ಯಕ್ಷಗಾನ ಕಲಾವಿದರ, ಹೆತ್ತವರ ಅವಹೇಳನ; ತಿಮರೋಡಿ ಅರ್ಜಿ ವಜಾ
ಪುತ್ತೂರು: ಯಕ್ಷಗಾನ ಕಲಾವಿದರು ಮತ್ತು ಅವರ ಕುಟುಂಬದ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಜಾಮೀನಿಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಯಕ್ಷಗಾನ ಕಲಾವಿದರಾದ ಪ್ರಜ್ವಲ್ ಕುಮಾರ್ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮತ್ತೋರ್ವ ಯಕ್ಷಗಾನ ಕಲಾವಿದರಾದ ದಿನೇಶ್ ಕೊಡಪದವು ಹಾಗೂ ಅವರ ತಾಯಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ದಿನೇಶ್ ಅವರ ತಾಯಿ ಲೀಲಾವತಿ ಶೆಟ್ಟಿಗಾರ್ ಅವರು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಧರ್ಮ ನಿಂದನೆ, ಅವಾಚ್ಯ ಶಬ್ದಗಳ ಬೈಗುಳ, ಜೀವ ಬೆದರಿಕೆ ಮತ್ತು ಮಹಿಳೆಯ ಘನತೆಗೆ ಕುತ್ತು ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಾದವನ್ನು ಮಂಡಿಸಿದ ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ. ವಾದವನ್ನು ಮಂಡಿಸಿದ್ದರು. ಈ ಸಂದರ್ಭದಲ್ಲಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ 1992ರಿಂದ ಇಲ್ಲಿಯವರೆಗೆ ಸುಮಾರು 31 ಕ್ರಿಮಿನಲ್ ಪ್ರಕರಣಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ 21ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಕುರಿತು ದಾಖಲೆಗಳನ್ನು ನೀಡಲಾಯಿತು.
ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಬಳಿಕ ಮಂಗಳೂರಿನ ಆರನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ತಿಮರೋಡಿ ಅವರ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಮತ್ತೊಮ್ಮೆ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಮಂಗಳೂರು: ಚಿಪ್ಪುಹಂದಿ ಮಾರಾಟಕ್ಕೆ ಯತ್ನ; ಮೂವರ ಬಂಧನ
ಮಂಗಳೂರು: ಚಿಪ್ಪುಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಘಟನೆ, ಕದ್ರಿ ಉದ್ಯಾನವನದ ಬಳಿ ನಡೆದಿದೆ. ಬೆಂಗಳೂರು, ಮಡಿಕೇರಿಯ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ದಿಲೀಪ್ ಜಿ.ಆರ್, ಸಿಬ್ಬಂದಿಗಳಾದ ತಾರಾನಾಥ್ ಎಸ್ ಮತ್ತು ಅಬ್ದುಲ್ ರವೂಫ್ ಅವರು ಕಾರ್ಯಚರಣೆ ನಡೆಸಿ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಂಗಳೂರಿನ ಎಚ್.ಆರ್.ಜಗದೀಶ್, ಕನಕಪುರ ನಿವಾಸಿ ಸಿದ್ದು ನಾಯ್ಕ, ಬನಶಂಕರಿ ನಿವಾಸಿ ಬಾಬು ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಈ ಸಂದರ್ಭದಲ್ಲಿ ಚಿಪ್ಪುಹಂದಿಯ 5.200 ಕಿಲೋಗ್ರಾಂ ತೂಕದ ಚಿಪ್ಪುಗಳನ್ನು ಮತ್ತು ಸುಮಾರು 3 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
• ಬೈಂದೂರು: ನಗದು ಹಣ ಕಳುವು
ಬೈಂದೂರು: ಎಸ್ ಬಿ ಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಘಟನೆ, ಯಡ್ತರೆ ಗ್ರಾಮದಲ್ಲಿ ನಡೆದಿದೆ. ರಾಜಸ್ಥಾನ ಮೂಲದ ರಾವಲ್ ಸಿಂಗ್ ಎನ್ನುವವರು ವಾಸವಾಗಿದ್ದ ಬಾಡಿಗೆ ಮನೆಯೊಂದರಲ್ಲಿ, ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಬಿ ಅವರ ನೇತೃತ್ವದಲ್ಲಿ ಪಿಎಸ್ಐ ಸುನೀಲ್ ಕುಮಾರ್, ನವೀನ್ ಬೋರಕರ, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ, ವೃತ್ತ ಕಛೇರಿಯ ಸಿಬ್ಬಂದಿಗಳಾದ ಶಿವಾನಂದ ಹುದ್ದಾರ, ಅಶೋಕ್ ರಾಥೋಡ್, ಸಿಡಿಆರ್ ವಿಭಾಗದ ದಿನೇಶ್ ಅವರು ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ರಾಜಸ್ಥಾನದ ಮಹೇಂದ್ರ ಸೈನ್ ಎಂದು ಗುರುತಿಸಲಾಗಿದೆ. ಆರೋಪಿಯ ಬಳಿಯಿದ್ದ 6 ಲಕ್ಷ ರೂಪಾಯಿಗಳಷ್ಟು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.







