ಶ್ರವಣ ಸಮಸ್ಯೆ ಇದೆಯಾ?.. ಶಿವಮೊಗ್ಗದಲ್ಲಿ ಫ್ರೀ ಕ್ಯಾಂಪ್!
– ಶಿವಮೊಗ್ಗದಲ್ಲಿ ಈಶ್ವರ್ ಮಲ್ಪೆ ತಂಡದಿಂದ ಉಚಿತ ಶ್ರವಣ ತಪಾಸಣಾ ಶಿಬಿರ
– ಹೊಸನಗರ: ಪಲ್ಟಿಯಾದ ಖಾಸಗಿ ಬಸ್: 11 ಜನಕ್ಕೆ ಗಾಯ!
– •ಶಿವಮೊಗ್ಗ: ಜಿಮ್ ಟ್ರೈನರ್ ಮೇಲೆ ಮುಖ ಮುಚ್ಚಿಕೊಂಡು ಹಲ್ಲೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಮುಳುಗು ತಜ್ಞರಾದ ಈಶ್ವರ್ ಮಲ್ಪೆಯವರ ತಂಡದ ವತಿಯಿಂದ ಶಿವಮೊಗ್ಗದ ರಾಷ್ಟ್ರೀಯ ಸಮಿತಿ ಮತ್ತು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಮೇ 10ರ ಭಾನುವಾರ ಮತ್ತು 11ರ ಸೋಮವಾರದಂದು ಎರಡು ದಿನಗಳ ಕಾಲ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ನೋಂದಣಿ ಮಾಡಿಸಬೇಕಾಗಿದ್ದು, 30ಜನರಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಲಾಗಿದೆ. ತಪಾಸಣಾ ಶಿಬಿರದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಪಾಲ್ಗೊಳ್ಳಲಿದ್ದು, ರೋಗಿಗಳ ತಪಾಸಣೆಯನ್ನು ನಡೆಸಲಿದ್ದಾರೆ. ಜೊತೆಗೆ ಶ್ರವಣ ಯಂತ್ರಕ್ಕೆ ಅಗತ್ಯವಿರುವ ಮೊತ್ತದ ಶೇಕಡಾ 40ರಷ್ಟು ಶುಲ್ಕವನ್ನು ಭರಿಸಲಾಗುತ್ತದೆ ಎನ್ನಲಾಗಿದೆ. ತಮ್ಮ ಹೆಸರನ್ನು ನೋಂದಾಯಿಸುವವರು 8951804399 ಸಂಖ್ಯೆಗೆ ಸಂಪರ್ಕಿಸಬೇಕಾಗಿ ಈ ಮೂಲಕ ತಿಳಿಸಲಾಗಿದೆ.
•ಹೊಸನಗರ: ಪಲ್ಟಿಯಾದ ಖಾಸಗಿ ಬಸ್: 11 ಜನಕ್ಕೆ ಗಾಯ!
ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಪಲ್ಟಿಯಾದ ಘಟನೆ, ಜಯನಗರದ ರಾಜ್ಯ ಹೆದ್ದಾರಿ 766 ಸಿ ಅಲ್ಲಿ ನಡೆದಿದೆ. ಬೆಳಿಗ್ಗೆ 5:15 ಸುಮಾರಿಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸಾಗರ್ ಎನ್ನುವ ಹೆಸರಿನ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಬಸ್ ನಲ್ಲಿದ್ದ ಒಟ್ಟು 11 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಹೊಸನಗರದ ಪೊಲೀಸರು ಸ್ಥಳದ ಪರಿಶೀಲನೆಯನ್ನು ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಹೊಸನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಶಿವಮೊಗ್ಗ: ಜಿಮ್ ಟ್ರೈನರ್ ಮೇಲೆ ಹಲ್ಲೆ
ಶಿವಮೊಗ್ಗ: ಜಿಮ್ ಟ್ರೈನರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ, ಗುರುವಾರ ರಾತ್ರಿ ವಿನೋಬನಗರದಲ್ಲಿ ನಡೆದಿದೆ. ಜಿಮ್ ಟ್ರೈನರ್ ತನ್ನ ಕೆಲಸ ಮುಗಿಸಿ, ಮನೆಗೆ ತೆರಳಲು ಜಿಮ್ ನಿಂದ ಹೊರಗೆ ಬಂದು, ಬೈಕ್ ಹತ್ತಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಅದೇ ಸಮಯದಲ್ಲಿ ಸುಮಾರು 25ರಿಂದ 30ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗಿದ್ದು, ಜಿಮ್ ಟ್ರೈನರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಕಬ್ಬಿಣದ ರಾಡ್ ನಿಂದ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಪರಿಣಾಮವಾಗಿ ಜಿಮ್ ಟ್ರೈನರ್ ತೀವ್ರ ರಕ್ತಸ್ರಾವದಿಂದ ನರಳಿದ್ದಾರೆ. ಇವರನ್ನು ಗುರುತಿಸಿದ ಸ್ನೇಹಿತರಾದ ಆಟೋ ಚಾಲಕರೊಬ್ಬರು ಟ್ರೈನರ್ ಅವರನ್ನು ತಮ್ಮ ಆಟೋದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸಧ್ಯ ಟ್ರೈನರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸರು ಸ್ಥಳದ ಪರಿಶೀಲನೆಯನ್ನು ನಡೆಸಿದ ಬಳಿಕ, ಟ್ರೈನರ್ ಅವರಿಗೆ ಕೇಳಿದ ಪ್ರಶ್ನೆಗೆ “ಆರೋಪಿಯು ಮುಖ ಮುಚ್ಚಿಕೊಂಡಿದ್ದರಿಂದ ಯಾರೆಂದು ಗುರುತಿಸಲು ಸಾಧ್ಯವಾಗಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








