ಕುವೆಂಪು ವಿವಿ ಘಟಿಕೋತ್ಸವ: ಸಾಧಕರ ಸಂಭ್ರಮ!
– ಅಜ್ಜಂಪುರದ ಕೂಲಿ ಕಾರ್ಮಿಕನ ಮಗನಿಗೆ 10 ಚಿನ್ನದ ಪದಕ
– 16,955 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಹಬ್ಬದ ವಾತಾವರಣ
– ಉದ್ಯೋಗಿಯಾಗದೆ ಉದ್ಯೋಗದಾತರಾಗಿ!: ರಾಜ್ಯಪಾಲ ಆಹ್ವಾನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವವು ಕುವೆಂಪು ವಿವಿಯಲ್ಲಿ ಸಾಧಕರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಿದ್ದು ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ. ಅಕ್ಷರ ಹಾಗೂ ಪ್ರೊ. ಹೆಚ್.ಎ. ರಂಗನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಅನಾರೋಗ್ಯದ ಕಾರಣ ಗೌರವ ಡಾಕ್ಟರೇಟ್ ಪಡೆಯಬೇಕಿದ್ದ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರು ಕಾರ್ಯಕ್ರಮದಿಂದ ಅನುಪಸ್ಥಿತರಿದ್ದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಂ (NETF) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
16,955 ವಿದ್ಯಾರ್ಥಿಗಳಿಗೆ ಪದವಿ, 153 ಮಂದಿಗೆ ಪಿಹೆಚ್ಡಿ
ಘಟಿಕೋತ್ಸವದಲ್ಲಿ 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿ ಒಟ್ಟು 16,955 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 106 ಪುರುಷರು ಮತ್ತು 57 ಮಹಿಳೆಯರು ಸೇರಿ 153 ಅಭ್ಯರ್ಥಿಗಳಿಗೆ ಪಿಹೆಚ್ಡಿ ಪದವಿ ದೊರೆಯಿತು. 155 ಸ್ವರ್ಣ ಪದಕಗಳಲ್ಲಿ 79 ವಿದ್ಯಾರ್ಥಿಗಳು ಪಾಲು ಪಡೆದರು; ಅದರಲ್ಲಿ 11 ಪುರುಷರು ಮತ್ತು 68 ಮಹಿಳೆಯರು ಇದ್ದಾರೆ. 21 ನಗದು ಬಹುಮಾನಗಳನ್ನು 29 ವಿದ್ಯಾರ್ಥಿಗಳು ಹಂಚಿಕೊಂಡರು.ಕಲಾ ವಿಭಾಗದಲ್ಲಿ 63, ವಿಜ್ಞಾನ ವಿಭಾಗದಲ್ಲಿ 84, ಶಿಕ್ಷಣ ವಿಭಾಗದಲ್ಲಿ 9, ವಾಣಿಜ್ಯ ವಿಭಾಗದಲ್ಲಿ 6 ಮತ್ತು ಕಾನೂನು ವಿಭಾಗದಲ್ಲಿ 1 ಅಭ್ಯರ್ಥಿ ಪಿಹೆಚ್ಡಿ ಪಡೆದರು. ವಿಜ್ಞಾನ ವಿಭಾಗದಲ್ಲಿ ಪಿಹೆಚ್ಡಿ ಪದವೀಧರರ ಪೈಕಿ ಐಪಿಎಸ್ ಅಧಿಕಾರಿ ಹರ್ಷ ಅವರೂ ಸ್ಥಾನ ಪಡೆದಿರುವುದು ವಿಶೇಷ.
ಉದ್ಯೋಗಿಯಾಗದೆ ಉದ್ಯೋಗದಾತರಾಗಿ!: ರಾಜ್ಯಪಾಲ ಆಹ್ವಾನ
ಘಟಿಕೋತ್ಸವದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಮಹಾಕವಿ ಕುವೆಂಪು ಅವರ ಹೆಸರಿನ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ಅತ್ಯಂತ ಸಂತೋಷ ಎಂದರು. ಪದವಿ ಮತ್ತು ಪಿಹೆಚ್ಡಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, “ಜಯ-ಅಪಜಯ ಜೀವನದ ಅನಿವಾರ್ಯ ಭಾಗ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಸ್ಪರ್ಧೆ ಅಗತ್ಯ” ಎಂದು ಎಚ್ಚರಿಸಿದರು. ಯುವಶಕ್ತಿಯು ಆತ್ಮನಿರ್ಭರ ಭಾರತ, ವಿಕಸಿತ ಭಾರತ ಮತ್ತು ‘ಲೋಕಲ್ ಟು ವೋಕಲ್’ ಅಭಿಯಾನಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದ ಅವರು, “ನೀವು ಉದ್ಯೋಗಿಗಳಾಗದೆ ಉದ್ಯೋಗದಾತರಾಗಬೇಕು” ಎಂದು ಕರೆ ನೀಡಿದರು.
ಶಿಕ್ಷಣ ಸಚಿವರ ಎಚ್ಚರಿಕೆ: ಕೇವಲ ಶೇ.17 ಇಂಜಿನಿಯರ್ಗಳಿಗೆ ಮಾತ್ರ ಉದ್ಯೋಗ
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ, 35 ವರ್ಷಗಳ ಶೈಕ್ಷಣಿಕ ಪಯಣ ಮುಗಿಸಿರುವ ಕುವೆಂಪು ವಿವಿಯಲ್ಲಿ ಸಾಧನೆಗಳ ಜೊತೆಗೆ ಹಲವಾರು ಸವಾಲುಗಳೂ ಇವೆ ಎಂದು ಸ್ಪಷ್ಟಪಡಿಸಿದರು. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಇಂಜಿನಿಯರಿಂಗ್ ಪದವಿ ಪಡೆಯುತ್ತಿರುವವರಲ್ಲಿ ಕೇವಲ ಶೇ.17 ಮಂದಿಗೆ ಮಾತ್ರ ಉದ್ಯೋಗ ಲಭಿಸುತ್ತಿರುವ ಕಳವಳಕಾರಿ ಅಂಕಿ-ಅಂಶ ಬಹಿರಂಗಪಡಿಸಿದ ಅವರು, ಕಂಪ್ಯೂಟರ್ ಕೋರ್ಸ್ಗಳ ಸೀಟುಗಳನ್ನು 70ಕ್ಕೆ ಸೀಮಿತಗೊಳಿಸಿ, ಐದು ವಿಭಾಗಗಳಲ್ಲಿ ಒಟ್ಟು 900 ಸೀಟುಗಳನ್ನು ನಿಗದಿ ಮಾಡಲಾಗಿದೆ ಎಂದರು. ನಿರ್ಲಕ್ಷಿತ ವಿಷಯಗಳಿಗೆ ಪ್ರಾಮುಖ್ಯತೆ ನೀಡಲು ಮತ್ತು ಪಠ್ಯ ಬದಲಾವಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
ಬಿ.ಎ. ಪದವಿಗೆ ದಾಖಲಾತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ 70 ಸಾವಿರ ಸೀಟುಗಳನ್ನು ಮುಚ್ಚಬೇಕಾದ ಸ್ಥಿತಿ ಒದಗಿದೆ ಎಂದ ಅವರು, ರಿಟೈಲ್, ಇ-ಕಾಮರ್ಸ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ 19 ಸಾವಿರ ಹೊಸ ಸೀಟುಗಳನ್ನು ಆರಂಭಿಸಲಾಗುತ್ತಿದ್ದು, 3,840 ಹೊಸ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದ್ದು, 40 ಪದವಿ ಕಾಲೇಜುಗಳನ್ನು ಮಾದರಿ ಕಾಲೇಜುಗಳನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಕೂಲಿ ಕಾರ್ಮಿಕನ ಮಗ ಅಭಿಷೇಕ್ಗೆ 10 ಚಿನ್ನದ ಪದಕ
ಈ ಘಟಿಕೋತ್ಸವದಲ್ಲಿ ಎಲ್ಲರ ಗಮನ ಸೆಳೆದ ಹೆಸರು ಅಭಿಷೇಕ್ ಎಚ್.ಎಂ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹೀರೆಕನವಂಗಲ ಗ್ರಾಮದ ಈ ಯುವಕ, ಕನ್ನಡ ಎಂ.ಎ (ಕನ್ನಡ ಭಾರತಿ) ವಿಭಾಗದಲ್ಲಿ 10 ಚಿನ್ನದ ಪದಕ ಮತ್ತು 2 ನಗದು ಬಹುಮಾನಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.








