ಶೃಂಗೇರಿ ಮತ ಮರು ಎಣಿಕೆ: ಚುನಾವಣಾಧಿಕಾರಿಗಳಿಗೆ ದೂರು!
– ಟಿ.ಡಿ.ರಾಜೇಗೌಡ ಅವರಿಂದ ಚುನಾವಣಾಧಿಕಾರಿಗಳಿಗೆ ದೂರು
– ಜೀವರಾಜ್ ಹೇಳಿದ್ದೇನು…? ರಾಜೇಗೌಡ ಹೇಳಿದ್ದೇನು..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮೇ 2ರ ಶನಿವಾರದಂದು ನಡೆದ ಅಂಚೆ ಮತಗಳ ಮರು ಎಣಿಕೆಯ ನಂತರ ರಾಜಕೀಯ ವಿವಾದವು ತೀವ್ರಗೊಂಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಟಿ.ಡಿ.ರಾಜೇಗೌಡ ಅವರು ವಿಜಯಶಾಲಿಯಾಗಿದ್ದು, ಅಂಚೆ ಮತಗಳ ಮರುಎಣಿಕೆಯ ನಂತರ ಬಿಜೆಪಿ ಪಕ್ಷದ ಜೀವರಾಜ್ ವಿಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅಂಚೆ ಮತಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ದೂರನ್ನು ದಾಖಲಿಸಿದ್ದು, ಜೀವರಾಜ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಪ್ರಕರಣವು ಕಾನೂನು ಹಾದಿ ಹಿಡಿದಿದೆ ಎನ್ನುವ ಮಾಹಿತಿ ಲಭಿಸಿದೆ.
ಇದರಿಂದಾಗಿ ಬೇಸತ್ತ ಜೀವರಾಜ್ ಅವರು ಇಂತಹ ಬೆಳವಣಿಗೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗದಿಂದ ತಾವು ವಿಜಯಶಾಲಿಯಾಗಿರುವ ಕುರಿತು ಇಮೇಲ್ ಮೂಲಕ ಪ್ರಮಾಣ ಪತ್ರ ಬಂದ ಕೆಲವೇ ನಿಮಿಷಗಳಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ ಎಂದು, ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರದಿದ್ದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇತ್ತು ಎಂದು ಜೀವರಾಜ್ ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯಲ್ಲಿ, ಹಾಗೂ ಪ್ರಮಾಣವಚನ ಸ್ವೀಕಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದ್ದಾರೆ ಎಂದು ಜೀವರಾಜ್ ಅವರು ದೂರಿದ್ದಾರೆ.
ಬಳಿಕ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ “ನನ್ನನ್ನು ಬದುಕಲು ಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಣಾಹಣಿಯು ರಾಜಕೀಯ ಮತ್ತು ಕಾನೂನು ಮಟ್ಟದಲ್ಲಿ ಬಹುಚರ್ಚಿತ ವಿಚಾರವಾಗಿದ್ದು, ಈ ವಿವಾದ ಸಂಪೂರ್ಣವಾಗಿ ನಿಲ್ಲಲು ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ನಿರ್ಧಾರವನ್ನು ಅವಲಂಬಿಸಬೇಕಾಗಿದೆ.
ರಾಜೇಗೌಡ ಅವರಿಂದ ದೂರು: ಸಾರಾoಶ ಏನು?
ಬೆಂಗಳೂರು: ಕಳೆದ ವಾರ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಅಂಚೆಮತಗಳ ಮರು ಎಣಿಕೆಯ ವಿಚಾರದ ಕುರಿತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಟಿ.ಡಿ.ರಾಜೇಗೌಡ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಡಿ.ಎನ್.ಜೀವರಾಜ್ ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ದಾಖಲೆಗಳ ತಿದ್ದುಪಡಿ ಮತ್ತು ಮತಪತ್ರಗಳನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಿದ್ದಾರೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಟಿ.ಡಿ.ರಾಜೇಗೌಡ ಅವರು ಗೆಲುವು ಸಾಧಿಸಿದ್ದು, ಮರುಎಣಿಕೆಯ ಬಳಿಕ ಡಿ.ಎನ್ ಜೀವರಾಜ್ ಅವರು ವಿಜಯಶಾಲಿಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಟಿ.ಡಿ.ರಾಜೇಗೌಡ ಅವರ ಪ್ರಕಾರ “2023ರಲ್ಲಿ ಸಿಂಧುವಾಗಿದ್ದ ನಮ್ಮ ಬಂಡಲ್ ನಲ್ಲಿದ್ದ ಸುಮಾರು 257 ಅಂಚೆ ಮತಗಳನ್ನು ಈಗಿನ ಮರು ಎಣಿಕೆಯಲ್ಲಿ ಡಬಲ್ ಎಂಟ್ರಿ ಎನ್ನುವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ಇಷ್ಟು ದೊಡ್ಡ ಪ್ರಮಾಣದ ಮತಗಳನ್ನು ತಪ್ಪಾಗಿ ತಿರಸ್ಕರಿಸಲು ಸಾಧ್ಯವೇ ಇಲ್ಲ. ಇದು ವ್ಯವಸ್ಥಿತ ಪಿತೂರಿಯಾಗಿದೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಜೀವರಾಜ್ ಅವರೊಂದಿಗೆ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳಾದ ವೇದಮೂರ್ತಿ ಮತ್ತು ರಮೇಶ್ ಅವರು ಶಾಮಿಲಾಗಿ ಮತಪತ್ರಗಳನ್ನು ತಿದ್ದಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಟಿ.ಡಿ.ರಾಜೇಗೌಡ ಅವರು ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 136ರ ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ಧಾರವೇನು ಎನ್ನುವುದು ಮತದಾರರಲ್ಲಿ ಕುತೂಹಲವನ್ನು ಮೂಡಿಸಿದೆ.








