ಕನ್ನಡ ಸಿನಿಮಾ ಕಲಾ ಕ್ಷೇತ್ರದಲ್ಲಿ ರವಿ ಸಂತೆಹಕ್ಕಲು ಇತಿಹಾಸ ಸೃಷ್ಟಿ
ಕನ್ನಡದ ಎಲ್ಲಾ ಖ್ಯಾತ ನಟರ ಸಿನಿಮಾಗಳಿಗೆ ಕಲಾ ನಿರ್ದೇಶನ
ಬಡತನದಲ್ಲಿ ಬೆಂದು ಕಲೆಯಲ್ಲಿ ಅರಳಿದ ಮಲೆನಾಡ ಸಾಧಕ
ರವಿ ಸಂತೆಹಕ್ಕಲು ಮಲೆನಾಡು ಮೂಲದ ಪ್ರತಿಭಾವಂತ ಕಲಾ ನಿರ್ದೇಶಕ. ಕನ್ನಡದ ಖ್ಯಾತ ನಟರ ಜತೆ ಹಿಟ್ ಸಿನಿಮಾ ನೀಡಿದ ಇವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಚಿತ್ರ ಕಲಾವಿದರು. ರವಿ ಸಂತೆಹಕ್ಕಲು ಅವರ ಭಜರಂಗಿ-2 ಚಿತ್ರದ ಕಲಾ ನಿರ್ದೇಶನಕ್ಕೆ 2021ನೇ ಸಾಲಿನ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರವಿ ಸಂತೆಹಕ್ಕಲು ಅವರ ಹೆಸರನ್ನು ಘೋಷಣೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಶುಭಾಶಯ ಸಲ್ಲಿಸಿದ್ದಾರೆ. ರವಿ ಅವರು 1968ರ ಮೇ 4ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಂತೆಹಕ್ಕಲು ಎಂಬಲ್ಲಿ ಜನಿಸಿದರು. ತಂದೆ ಅಪ್ಪಯ್ಯ ಗೌಡ ತಾಯಿ ನಾಗಮ್ಮ. ರವಿ ಅವರು ಐದನೇ ತರಗತಿಯವರೆಗೂ ಸಂತೆಹಕ್ಕಲಿನಲ್ಲಿ ಕಲಿತರು. ಐದನೇ ತರಗತಿಯನ್ನು ಸಮೀಪದ ಅಕ್ಕಲಾಪುರ ಗ್ರಾಮದಲ್ಲು, ಏಳು, ಎಂಟನೇ ತರಗತಿಯನ್ನು ತನಿಕಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಕೋಣಂದೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬಳಿಕ ಬದುಕು ಅವರನ್ನು ಬೆಂಗಳೂರು ಕಡೆಗೆ ನೂಕಿತು.
ಹೋಟೆಲ್ ಕೆಲಸದಿಂದ ಕಲಾ ನಿರ್ದೇಶಕನವರೆಗಿನ ಪಯಣ
ಮನೆಯ ಬಡತನದ ಬೇಗೆಯನ್ನು ನಿವಾರಿಸಲು 1988ರಲ್ಲಿ ಬೆಂಗಳೂರಿನತ್ತ ಉದ್ಯೋಗ ಅರಸಿ ಪ್ರಯಾಣ ಬೆಳೆಸಿದರು. ಕೆಲಕಾಲ ಅಲ್ಲಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡಿದರು. ಆದರೆ ಅಣ್ಣನ ಒತ್ತಡ ಮತ್ತು ಹೊಟೇಲ್ ನಲ್ಲಿ ಎದುರಿಸಿದ ನಿಂದನೆಯ ಪರಿಣಾಮವಾಗಿ ಕೆಲಸ ಬಿಟ್ಟು, ವಿದ್ಯಾಭ್ಯಾಸವನ್ನು ಮುಂದುವರೆಸಿದರು. ವಿಜಯನಗರದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಲೇ ತಾತ್ಕಾಲಿಕ ಕೆಲಸಕ್ಕೆ ಸೇರಿಕೊಂಡರು.
ಈ ಸಮಯದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಪರಿಚಯವಾದ ಕಾರಣ ಅವರ ಮೊದಲ ಮತ್ತು ಎರಡನೇ ಚಿತ್ರವಾದ ‘ಉಂಡೂ ಹೋದ ಕೊಂಡೂ ಹೋದ’ ಮತ್ತು ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರಗಳಿಗೆ ಸಹಾಯಕರಾದರು. ಬಳಿಕ ಖ್ಯಾತ ಛಾಯಾಗ್ರಾಹಕರಾದ ಚಿಟ್ಟಿಬಾಬು ಅವರ ಮಾರ್ಗದರ್ಶನದಲ್ಲಿ ಛಾಯಾಗ್ರಹಣವನ್ನು ಕಲಿತರು. ಆದರೆ ಅನಾರೋಗ್ಯದ ನಿಮಿತ್ತ ಹುಟ್ಟೂರಿಗೆ ಹಿಂತಿರುಗಬೇಕಾಯಿತು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಬೆಂಗಳೂರಿಗೆ ಮರಳಿದ ರವಿ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೇರಿಕಾ ಅಮೇರಿಕಾ’ ‘ಹೂಮಳೆ’ ಚಿತ್ರಗಳಿಗೆ ಸಹಾಯಕರಾದರು. ದಿನೇಶ್ ಬಾಬು ಅವರ ‘ಅಮೃತ ವರ್ಷಿಣಿ’ ಚಿತ್ರಕ್ಕೆ ಸಹಾಯಕರಾಗಿದ್ದ ಸಮಯದಲ್ಲಿ ತಮ್ಮ ವೃತ್ತಿಯಲ್ಲಿ ಹೊಸ ತಿರುವು ದೊರೆಯಿತು. ಖ್ಯಾತ ಕಲಾ ನಿರ್ದೇಶಕರಾದ ಶಶಿಧರ ಅಡಪ ಅವರ ಗುಂಪಿನೊಳಗೆ ರವಿ ಸಂತೆಹಕ್ಕಲು ಅವರಿಗೆ ಪ್ರವೇಶ ದೊರೆಯಿತು.
ಸಹಾಯಕ ಕಲಾ ನಿರ್ದೇಶಕರಾಗಿ ರೂಪುಗೊಂಡ ಬಳಿಕ ಗಿರೀಶ್ ಕಾರ್ನಾಡ್, ಐ.ಎಂ.ವಿಠಲಮೂರ್ತಿ ಅವರ ನಿರ್ಮಾಣದ ‘ಕಾನೂರು ಹೆಗ್ಗಡತಿ’, ಟಿ.ಎನ್.ಸೀತಾರಾಮ್ ಅವರ ‘ಮತದಾನ’, ಗಿರೀಶ್ ಕಾಸರವಳ್ಳಿ ಅವರ ‘ದ್ವೀಪಾ’, ‘ಹಸೀನಾ’, ‘ಕೂರ್ಮಾವತಾರ’ ಪಿ.ಶೇಷಾದ್ರಿ ಅವರ ‘ತುತ್ತೂರಿ’, ಯೋಗರಾಜ ಭಟ್ಟರ ‘ಮಣಿ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ಸೂರಿಯವರ ‘ಜಂಗ್ಲಿ’, ‘ಕಡ್ಡಿಪುಡಿ’, ‘ಅಣ್ಣಾಬಾಂಡ್’ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದರು. ಈ ನಡುವೆ ‘ಚಿದಂಬರ ರಹಸ್ಯ’, ‘ಸಾಕ್ಷಿ’, ‘ಕುಸುಮಬಾಲೆ’ ಕಿರುಚಿತ್ರಗಳಿಗೆ ಕೆಲಸ ಮಾಡಿದರು.
ಗೂಗ್ಲಿ ಚಿತ್ರದ ಮೂಲಕ ಹೊಸ ಅಧ್ಯಾಯ
ಜಯಣ್ಣ ಕಂಬೈನ್ಸ್’ ನಿರ್ಮಾಣದ ‘ಗೂಗ್ಲಿ’ ಚಿತ್ರದ ಮೂಲಕ ಕಲಾ ನಿರ್ದೇಶಕರಾದರು. ರವಿ ಅವರು ಕೇವಲ ಚಲನಚಿತ್ರಗಳಿಗೆ ಮಾತ್ರವಲ್ಲದೆ ವಿಶ್ವ ಕನ್ನಡ ಸಮ್ಮೇಳನ, ಜಾನಪದ ಜಾತ್ರೆ, ಹಂಪಿ ಉತ್ಸವದಂತ ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಲಾ ನಿರ್ದೇಶಕರಾದ ಬಳಿಕ ಭಜರಂಗಿ – 2016, ಬಹದ್ದೂರ್, ಜೈಲಲಿತಾ, ಚಾರ್ಲಿ, ದೃಶ್ಯಂ, ಶಿವಲಿಂಗ, ಯೂಟರ್ನ್- 2016, ಮುಗುಳುನಗೆ- 2017, ಹೆಬ್ಬುಲಿ – 2018, ಸೀತಾರಾಮ ಕಲ್ಯಾಣ- 2019, ಭಜರಂಗಿ – 2(2021), ದೃಶ್ಯ – 2(2021), ಜೇಮ್ಸ್ (2021), ಗೀತಾ ಶಿವರಾಜಕುಮಾರ್ ಅವರ ಗೀತಾ ಪಿಚ್ಚರ್ಸ್ ಅಡಿಯಲ್ಲಿ ನಿರ್ಮಾಣವಾದ ಚೊಚ್ಚಲ ಚಿತ್ರ ವೇದ(2022), ಹೊಂಬಾಳೆ ಫಿಲ್ಮ್ಸ್ ಅವರ ‘ಭಘೀರ’ (2023) ಚಿತ್ರಗಳಿಗೆ ಕಲಾ ನಿರ್ದೇಶಕರಾದರು.
ಭಜರಂಗಿ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ
ಭಜರಂಗಿ ಚಿತ್ರಕ್ಕೆ 2016 – 17ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಹೆಬ್ಬುಲಿ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಭಜರಂಗಿ -2 ಚಿತ್ರಕ್ಕೆ ಚಂದನವನದ ಅತ್ಯುತ್ತಮ ವಿಮರ್ಶಕರ ಪ್ರಶಸ್ತಿ ಲಭಿಸಿದೆ.








