ಅತೀ ಕಿರಿಯ ವಯಸ್ಸಲ್ಲಿ ರೋಲ್ಸ್ ರಾಯ್ಸ್ ಕಂಪನಿ ಉದ್ಯೋಗಿ ಮಂಗಳೂರು ಹುಡುಗಿ ರಿತುಪರ್ಣ
– ಓದುತ್ತಲೇ ಕೆಲಸ ಮಾಡಿ ಅಮೇರಿಕಾದಲ್ಲಿ ಕೆಲಸ ಗಿಟ್ಟಿಸಿದಳು
ವಿದ್ಯಾರ್ಥಿನಿಯಾಗಿದ್ದಾಗಲೇ ಪ್ರತಿಷ್ಠಿತ ಕಂಪನಿಯೊಂದರಲ್ಲಿ, ಲಕ್ಷಾಂತರ ರೂಪಾಯಿ ವೇತನವನ್ನು ಪಡೆಯುವ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಮೂಲಕ, ಈ ಉದ್ಯೋಗವನ್ನು ಪಡೆದ ಅತ್ಯಂತ ಕಿರಿಯ ಅಭ್ಯರ್ಥಿ ಮತ್ತು ಮೊದಲ ಕನ್ನಡತಿ ಎಂಬ ಹೆಗ್ಗಳಿಕೆಗೆ ಮಂಗಳೂರಿನ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ರಿತುಪರ್ಣ ಪಾತ್ರರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಕಲಿತು, ವಿದೇಶಿ ಕಂಪನಿಯಲ್ಲಿ ಉದ್ಯೋಗವನ್ನು ಪಡೆದಿದ್ದರೂ, ಮಂಗಳೂರು ಶೈಲಿಯ ಶುದ್ಧ ಕನ್ನಡದಲ್ಲಿ ಆಡುವ ಮಾತುಗಳನ್ನು ಕೇಳುತ್ತಿದ್ದರೆ ಕನ್ನಡಿಗರಿಗೆ ಮತ್ತೊಂದು ರೀತಿಯ ಹೆಮ್ಮೆಯನ್ನು ಮೂಡಿಸುತ್ತಿದೆ.
ರಿತುಪರ್ಣ ಅವರು ಮಂಗಳೂರಿನ ವಾಸಿಯಾಗಿದ್ದು, ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋದೂರಿನವರು. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಪ್ರಸಿದ್ಧ ಕಾರ್ ಕಂಪನಿಯಾದ ರೋಲ್ಸ್ ರಾಯ್ಸ್ ನಲ್ಲಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಟೋಮೊಬೈಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ವ್ಯಾಸಂಗಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ಷದಿಂದಲೂ ಕಠಿಣ ಪರಿಶ್ರಮವನ್ನು ಹಾಕುತ್ತಲೇ ಬಂದಿದ್ದಾರೆ. ಕಲಿಯುವ ಪ್ರತಿಯೊಂದು ವಿಷಯವನ್ನು, ತಮ್ಮದೇ ಆಗ ಕೌಶಲ್ಯದ ಮೂಲಕ ಪ್ರಾಯೋಗಿಕವಾಗಿ ಅಭ್ಯಾಸ ನಡೆಸುತ್ತಿದ್ದರು. ಇನ್ನು ಪ್ರಾಜೆಕ್ಟ್ ವರ್ಕ್ ಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದರು. ಇದೇ ಅವರ ಯಶಸ್ಸಿನ ಗುಟ್ಟು.
ಕಾರುಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ರಿತುಪರ್ಣ ಅವರು, ಸದಾ ಅವುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸುವುದು, ಅವುಗಳನ್ನು ತಯಾರಿಸಿರುವ ಬಗೆಯ ಕುರಿತು ಕುತೂಹಲದಿಂದ ನೋಡುವುದು ನಿರಂತರವಾಗಿತ್ತು. ಮರ್ಸಿಡೀಸ್ ಕಾರ್ ಬಗ್ಗೆ ತಿಳಿದುಕೊಂಡಿದ್ದು, ಆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರ ಪರಿಚಯ ಕೂಡ ಇತ್ತು. ಆದರೆ ರೋಲ್ಸ್ ರಾಯ್ಸ್ ಇವರಿಗೆ ಹೊಸದು. ಹೀಗೆ ಒಮ್ಮೆ ಈ ಕಾರ್ ಗಳ ಕುರಿತು ಅದರ ಕಂಪನಿಯ ವೆಬ್ ಸೈಟ್ ನಲ್ಲಿ ನೋಡುತ್ತಿರುವಾಗ, ಕಂಪನಿಯಲ್ಲಿ ತರಬೇತಿ ಪಡೆಯಲು ಅರ್ಜಿಯನ್ನು ಪ್ರಕಟಿಸಿದ್ದರು. ಆಗ ರಿತುಪರ್ಣ ಅವರು ಒಮ್ಮೆ ಪ್ರಯತ್ನಿಸಿ ನೋಡೋಣ, ತರಬೇತಿ ಪಡೆದುಕೊಂಡರೆ, ಸಿಗುವ ಪ್ರಮಾಣ ಪತ್ರದ ಆಧಾರದ ಮೇಲೆ ಬೇರೆಡೆ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬಹುದು ಎಂದು ಯೋಚಿಸಿದರು. ಅರ್ಜಿ ಸಲ್ಲಿಸಿದ ಬಳಿಕ ಅವಕಾಶ ದೊರೆಯಿತು. ರೋಲ್ಸ್ ರಾಯ್ಸ್ ಕಂಪನಿಯವರು ತರಬೇತಿಯ ಸಮಯದಲ್ಲಿ ಅನೇಕ ಟಾಸ್ಕ್ ಗಳನ್ನು ನೀಡಿದರು. ಇನ್ನು ವಿದ್ಯಾರ್ಥಿನಿಯಾಗಿದ್ದ ರಿತುಪರ್ಣ ಅವರಿಗೆ ಇದು ಕೊಂಚ ಕಷ್ಟವಾಯಿತು. ಆದರೂ ಎದೆಗುಂದಲಿಲ್ಲ.
ಅನುಭವಸ್ಥರ ಸಲಹೆ, ಹಲವಾರು ಪುಸ್ತಕಗಳ ಪರಾಮರ್ಶನದಿಂದ ಮಾಹಿತಿಗಳನ್ನು ಸಂಗ್ರಹಿಸಿ, ಟಾಸ್ಕ್ ಗಳನ್ನು ಸಮಯದ ಮಿತಿಯೊಳಗೆ ಬೇಗನೆ ಮುಗಿಸಿ ಬಿಡುತ್ತಿದ್ದರು. ಕೇವಲ ತರಬೇತಿಗಾಗಿ ಅರ್ಜಿ ಸಲ್ಲಿಸಿದ ರಿತುಪರ್ಣ ಅವರ ಪರಿಶ್ರಮಕ್ಕೆ ತಕ್ಕ ಫಲ ಆ ಸಂದರ್ಭದಲ್ಲಿ ದೊರೆಯಿತು. ಇವರ ಕಾರ್ಯವೈಖರಿ, ಸಮರ್ಪಣಾ ಭಾವ ಮತ್ತು ಕೌಶಲ್ಯವನ್ನು ಸೂಕ್ಷ್ಮವಾಗಿ ಗಮನಿಸಿದ ಕಂಪನಿಯವರು, ಇವರನ್ನು ತಮ್ಮ ಉದ್ಯೋಗಿಯಾಗಿ ಆರಿಸಿಕೊಂಡರು. ಪ್ರಾರಂಭದಲ್ಲಿ ವಾರ್ಷಿಕ 39.05 ಲಕ್ಷ ವೇತನವನ್ನು ನಿಗದಿಪಡಿಸಿದ್ದರು, ಆದರೆ ಇವರ ಸಾಮರ್ಥ್ಯವನ್ನು ಮನಗಂಡು 72.03 ಲಕ್ಷ ನೀಡಲು ನಿರ್ಧರಿಸಿದರು. ನಿಜವಾಗಿ ನೋಡುವುದಾದರೆ ರಿತುಪರ್ಣ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಕಾರಣ ರಾತ್ರಿ ಹನ್ನೆರಡರಿಂದ ಬೆಳಗಿನ ಜಾವ ಆರುವರೆ ತನಕ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಬೆಳಿಗ್ಗೆ ಎಂಟು ವರೆಗೆ ಕಾಲೇಜಿನ ತರಗತಿಗಳಿಗೆ ಹಾಜರಾಗುತ್ತಿದ್ದರು. ಕಾಲೇಜ್ ಮುಗಿಸಿ ಬರುವುದು ಸಂಜೆ ಐದು ಗಂಟೆಗೆ. ಕೆಲವೇ ಗಂಟೆ ನಿದ್ದೆ ಮಾಡಿ ಮತ್ತೆ ರಾತ್ರಿಯ ಕರ್ತವ್ಯಕ್ಕೆ ಸಿದ್ಧರಾಗುತ್ತಿದ್ದರು. ಆ ಶ್ರಮದ ಪ್ರತಿಫಲವೇ ಇದು ಎನ್ನುವುದು ಎಲ್ಲರ ಅಭಿಪ್ರಾಯ. ಕೆಲವೊಮ್ಮೆ ಬೆಳಗ್ಗಿನ ಎರಡು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದರು ಎಂದು ರಿತುಪರ್ಣ ಅವರು ಕೃತಜ್ಞತೆಯನ್ನು ಸಲ್ಲಿಸುತ್ತಾರೆ.
ತಂದೆ ಸೇವೆಯೇ ದೊಡ್ಡ ಸಾಧನೆಗೆ ಪ್ರೇರಣೆ
ತಂದೆ ಸರೇಶ್ ಕೂಡ ಮಂಗಳೂರಲ್ಲಿ ಸೇವೆ ಮೂಲಕವೇ ಹೆಸರಾದವರು. ತಂದೆಯ ಕಷ್ಟ ನೋಡುತ್ತಲೇ ಬೆಳೆದ ಮಗಳು ರಿತುಪರ್ಣ. ವೈದ್ಯೆಯಾಗಬೇಕೆಂಬ ಬಯಕೆಯನ್ನು ಹೊಂದಿದ್ದ ರಿತುಪರ್ಣ ತಂದೆಗೆ ಆರ್ಥಿಕವಾಗಿ ಹೊರೆಯಾಗಬಾರದು ಎಂದು, ಇಂಜಿನಿಯರಿಂಗ್ ಸೇರಿಕೊಂಡರು. ಇದರಲ್ಲಿ ಮತ್ತೊಂದು ರೀತಿ ಸಾಧಿಸಿದರು. ಮೂಲತಃ ಮಲೆನಾಡಿನವರಾದ ಕಾರಣ ಸಹಜವಾಗಿ ಸಾಹಿತ್ಯದ ಆಸಕ್ತಿ ಅಧಿಕವಾಗಿದೆ. ಅಜ್ಜಿಯ ಮನೆ ತೀರ್ಥಹಳ್ಳಿಯಾದ ಕಾರಣ ಇವರ ಮೆಚ್ಚಿನ ಕವಿ ಕುವೆಂಪು. ರಿತುಪರ್ಣ ಅವರು ಶಾಲಾ ಕಾಲೇಜು ದಿನಗಳಲ್ಲಿ ಕವಿತೆಗಳನ್ನು ರಚಿಸಿ, ಅಲ್ಲಿನ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ಆಸಕ್ತಿ ಇರುವ ಇವರು, ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿದ್ದಾರೆ.
ತಾಯಿ…..
ಸಂಶೋಧನೆ ಮಾಡಿ ಸೈ ಎನಿಸಿಕೊಂಡರು!
ಅಡಿಕೆ ಮರ ಹತ್ತಿ, ಔಷಧಿಗಳನ್ನು ಹೊಡೆಯಲು ಹೊಸ ಯಂತ್ರವನ್ನು ತಮ್ಮ ಸಹಪಾಠಿಗಳೊಂದಿಗೆ ತಯಾರಿಸಿ, ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರದರ್ಶಿಸುವ ಮೂಲಕ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಕಾಲೇಜಿನ ಗುಂಪಿನೊಂದಿಗೆ ಪಡೆದುಕೊಂಡಿದ್ದಾರೆ. ಮತ್ತು ಕಸದ ವಿಲೇವಾರಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಾಹನಗಳಿಗೆ ಯಾವುದೇ ಹಾಡುಗಳು ಬಾರದ ಕಾರಣ, ಕಸವನ್ನು ಗಾಡಿಗೆ ಹಾಕುವಲ್ಲಿ ವ್ಯತ್ಯಾಸವಾಗುತ್ತಿತ್ತು.
ಹೀಗಾಗಿ ಕೆಲವರೊಂದಿಗೆ ಸೇರಿಕೊಂಡು ಒಂದು ಆ್ಯಪ್ ಪ್ರಾರಂಭಿಸುವ ಮೂಲಕ, ಮನೆಯ ಹತ್ತಿರ ಗಾಡಿ ಬಂದೊಡನೆ ಸಂದೇಶ ಬಂದು ಮನೆಯೊಳಗಿರುವವರು, ಕಸವನ್ನು ತಂದು ಗಾಡಿಗೆ ಹಾಕುವ ವ್ಯವಸ್ಥೆಯನ್ನು ಮಾಡಿದ್ದಾರೆ. ಮನೆಯಲ್ಲಿ ಸದಸ್ಯರು ಇಲ್ಲದ ವೇಳೆಯಲ್ಲಿ ಅಥವಾ ಕಸದ ಗಾಡಿ ಬಾರದ ದಿನ ಕೂಡ ಮೊಬೈಲ್ ಗಳಿಗೆ ಸಂದೇಶ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬೀದಿ ನಾಯಿಗಳು ಮನೆಯ ಮುಂದೆ ಇರಿಸಿರುವ ಕಸದ ರಾಶಿಯನ್ನು, ರಸ್ತೆಯ ತುಂಬೆಲ್ಲ ಹರಡಿ ಕಲುಷಿತಗೊಳಿಸುವುದನ್ನು ತಡೆಹಿಡಿಯಲಾಗಿದೆ.
ಭಾರತಕ್ಕೆ ಬಂದು ಸ್ಟಾರ್ಟ್ ಅಪ್ ಮಾಡುವಾಸೆ!
ರೋಲ್ಸ್ ರಾಯ್ಸ್ ಯುಎಸ್ಎ ಕಂಪನಿಯಲ್ಲಿ ಉದ್ಯೋಗಿಯಾಗಿ ಹೊರಟಿರುವ ರಿತುಪರ್ಣ ಅವರು, ಎರಡು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಿ, ಮರಳಿ ಭಾರತಕ್ಕೆ ಬಂದು, ಇಲ್ಲಿನ ರೈತರಿಗೆ ನೆರವಾಗುವಂತಹ ಹೊಸತನ್ನೇನಾದರೂ ತಯಾರಿಸಿ, ನಮ್ಮವರ ಸೇವೆ ಮಾಡಬೇಕೆಂಬ ಬಲವಾದ ಉದ್ದೇಶವನ್ನು ಹೊಂದಿದ್ದಾರೆ. ಇತ್ತೀಚಿಗೆ ಅವರ ಮೋಟಿವೇಷನ್ ಮಾತು ಕೂಡ ಗಮನ ಸೆಳೆದಿದೆ. ಯುವ ಜನತೆ ಮೊಬೈಲ್, ಸೋಷಿಯಲ್ ಮೀಡಿಯಾ, ಬೇಡದ ಫ್ಯಾಷನ್ ನಡುವೆ ಈಕೆ ಎಲ್ಲರಿಗೂ ಮಾದರಿಯಾಗಿದ್ದಾರೆ.








