ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಪುರೋಹಿತರ ಮೇಲೆ ಹಲ್ಲೆ
• ಬೆಳ್ತಂಗಡಿ: ಕ್ರೈನ್ ಢಿಕ್ಕಿ; ವ್ಯಕ್ತಿ ಸಾವು
• ಮೂಡಬಿದರೆ: ಶಾರ್ಟ್ ಸರ್ಕ್ಯೂಟ್ ನಿಂದ ತೆಂಗಿನಮರ, ಗಿಡಗಳ ನಾಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಪುತ್ತೂರು: ಪುರೋಹಿತರ ಮೇಲೆ ಹಲ್ಲೆ
ಪುತ್ತೂರು: ಪೂಜೆಗೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು, ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಪುರೋಹಿತರ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ, ಕಬಕ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪುರೋಹಿತರನ್ನು ವಿದ್ಯಾಪುರ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಮನೆಯೊಂದರಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮವನ್ನು ಮುಗಿಸಿ ವಿದ್ಯಾಪುರಕ್ಕೆ ತೆರಳಿದ್ದು, ರಸ್ತೆಯ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಜನದಟ್ಟಣೆಯ ನಡುವೆ ಮಗವೊಂದು ಕಾರಿನ ಬಳಿ ಬಂದಿದೆ.
ಗಣೇಶ್ ಅವರು ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದು, ಮಗು ಬಂದಿರುವುದನ್ನು ಗಮನಿಸಿ, ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮಗುವಿಗೆ ಕಾರು ತಾಗಿಸಿದ್ದಾರೆ ಎಂದು ಸುಳ್ಳು ಅಪವಾದವನ್ನು ಹೊರೆಸಿ, ಅವಾಚ್ಯ ಶಬ್ದಗಳಿಂದ ಬೈದು, ಗಣೇಶ್ ಅವರ ಮೇಲೆ ದಾಳಿ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಗಣೇಶ್ ಭಟ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬೆಳ್ತಂಗಡಿ: ಕ್ರೈನ್ ಢಿಕ್ಕಿ; ವ್ಯಕ್ತಿ ಸಾವು
ಬೆಳ್ತಂಗಡಿ: ಕ್ರೈನ್ ವೊಂದು ದ್ವಿಚಕ್ರ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಬೆಳಾಲು ಪೇಟೆಯಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಬಳಂಜ ಗ್ರಾಮದ ಜಯ ಮೇಸ್ತ್ರಿ ಎಂದು ಗುರುತಿಸಲಾಗಿದೆ. ಜಯ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಸ್ಥಳದ ಪರಿಶೀಲನೆಯನ್ನು ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಮೂಡಬಿದರೆ: ಶಾರ್ಟ್ ಸರ್ಕ್ಯೂಟ್ ನಿಂದ ತೆಂಗಿನಮರ ಗಿಡಗಳ ನಾಶ
ಮೂಡಬಿದರೆ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿರುವ ಘಟನೆ, ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪುಗುಡ್ಡೆ ಎನ್ನುವಲ್ಲಿ ನಡೆದಿದೆ. ಕಾಲೂರು ರಾಜೇಶ್ ಪುಜಾರಿ ಎನ್ನುವವರಿಗೆ ಸೇರಿದ ಜಾಗದಲ್ಲಿ ಈ ಅನಾಹುತ ಎದುರಾಗಿದೆ ಎನ್ನಲಾಗಿದೆ. ಪರಿಣಾಮವಾಗಿ ತೋಟದಲ್ಲಿದ್ದ ಕೆಲವು ತೆಂಗಿನಮರಗಳು, ಗಿಡಗಳು ಸುಟ್ಟು ಬೂದಿಯಾಗಿವೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.







