ನರಸಿಂಹರಾಜಪುರ: ವ್ಯಕ್ತಿಯೊಬ್ಬರು ತಮ್ಮ ಪರಿಚಯಸ್ಥರಿಂದ ಕೊಡಿಸಿದ್ದ 50.000ರೂಪಾಯಿ ಸಾಲದ ಹಣವನ್ನು ಮರಳಿ ಕೇಳಿದ್ದಕ್ಕೆ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ನಡೆದಿದೆ. ಮುದುಗುಣಿ ಗ್ರಾಮದ ನಿವಾಸಿಯಾದ ರಾಜು ಅವರು ಕಳೆದ 5 ತಿಂಗಳ ಹಿಂದೆ ತಮ್ಮ ಪರಿಚಯಸ್ಥರಾದ ಕಾಡುಸಿಗಸೆ ಗ್ರಾಮದ ಚಂದ್ರೇಗೌಡ ಅವರಿಂದ ತಮ್ಮ ಗ್ರಾಮದ ನಿವಾಸಿಯಾದ ಸುರೇಶ್ ಎನ್ನುವವರಿಗೆ ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ 50.000 ರೂಪಾಯಿಗಳಷ್ಟು ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದೆ ರಾಜು ಅವರು ಸುರೇಶ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಲದ ವಿಚಾರವನ್ನು ಪ್ರಸ್ತಾಪಿಸಿ, ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುರೇಶ್ ಅವರು ನಾಳೆ ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿದ್ದರು. ಮರುದಿನ ಸುರೇಶ್ ಅವರು ಹರಿಪ್ರಸಾದ್ ಎನ್ನುವವರನ್ನು ಜೊತೆಗೆ ಕರೆದುಕೊಂಡು ಬಂದು ರಾಜು ಅವರ ಮನೆಯ ಬಳಿ ಗಲಾಟೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸಾಲದ ಹಣವನ್ನು ಮರಳಿ ಕೇಳಿದ್ದಕ್ಕಾಗಿ ರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಜು ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಹೊಸನಗರ: ಮಹಿಳೆಗೆ ಕಚ್ಚಿದ ನಾಗರಹಾವು
ಹೊಸನಗರ: ಅಡಿಕೆ ತೋಟದ ಕೆಲಸದಲ್ಲಿ ನಿರತರಾಗಿದ್ದ ಮಹಿಳೆಗೆ ನಾಗರಹಾವೊಂದು ಕಚ್ಚಿರುವ ಘಟನೆ, ಕಳೆದೆರಡು ದಿನಗಳ ಹಿಂದೆ ನಗರ ಸಮೀಪದ ಕಟ್ಟಿಕೊಪ್ಪ ಗ್ರಾಮದ ದೊಡ್ಡಿಮನೆಯಲ್ಲಿ ನಡೆದಿದೆ. ತಮ್ಮ ಪತಿಯೊಂದಿಗೆ ಅಡಿಕೆ ತೋಟದಲ್ಲಿ ಅಡಿಕೆ ಮತ್ತು ಸೋಗೆಗಳನ್ನು ಆರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೈಬೆರಳಿಗೆ ನಾಗರಹಾವು ಕಚ್ಚಿದೊಡನೆ ಮಹಿಳೆಯು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆಗೆ ತಲುಪುವುದರ ಒಳಗಾಗಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದರು ಎನ್ನುವ ಮಾಹಿತಿ ಲಭಿಸಿದೆ. ಮೃತ ಮಹಿಳೆಯನ್ನು ಶ್ರೀಲತಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀಲತಾ ಅವರ ಪತಿ ಡಿ.ವಿ.ನಾಗರಾಜ್ ಅವರು ನೀಡಿರುವ ಹೇಳಿಕೆಯ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಚಿಕ್ಕಮಗಳೂರು: ನರ್ಸಿಂಗ್ ವಿದ್ಯಾರ್ಥಿ ನಾಪತ್ತೆ
ಚಿಕ್ಕಮಗಳೂರು: ಹಾಸ್ಟೆಲ್ ನಿಂದ ಹೊರಗೆ ಹೋದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ನಿವಾಸಿಯಾದ ರಕ್ಷಿತ್ ಟಿ.ಎಸ್ ಎಂದು ಹೇಳಲಾಗಿದೆ. ರಕ್ಷಿತ್ ಚಿಕ್ಕಮಗಳೂರಿನ ಸಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ಅನ್ನು ವ್ಯಾಸಂಗ ಮಾಡುತ್ತಿದ್ದು, ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ನವೆಂಬರ್ 7ರ ಶನಿವಾರದಂದು ಮಧ್ಯಾಹ್ನ 12:30ರ ಸುಮಾರಿಗೆ ಹಾಸ್ಟೆಲ್ ನಿಂದ ಹೊರಗೆ ಹೋದ ರಕ್ಷಿತ್ ಮರಳಿ ಹಾಸ್ಟೆಲ್ ಗಾಗಲಿ ತನ್ನ ಮನೆಗಾಗಲಿ ಮರಳಿ ಬಂದಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಹಾಸ್ಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ರಕ್ಷಿತ್ ಹೊರಹೋಗಿರುವುದು ದಾಖಲಾಗಿದ್ದು, ಹಿಂತಿರುಗಿರುವುದು ಪತ್ತೆಯಾಗಿಲ್ಲ. ಅಲ್ಲದೆ ಹಾಸ್ಟೆಲ್ ನಿಂದ ಹೊರಹೋದ ದಿನ ರಾತ್ರಿ ರಕ್ಷಿತ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದು, ಬಳಿಕ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಕುಟುಂಬದವರಿಗೂ ಆತ ಸಂಪರ್ಕಿಸಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 11ರ ಬುಧವಾರದಂದು ರಕ್ಷಿತ್ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಬುದ್ಧಿಮಾಂದ್ಯ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ
ಸಾಗರ: ಬುದ್ಧಿಮಾಂದ್ಯ ವ್ಯಕ್ತಿಯ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ, ಬುಧವಾರದಂದು ಜೋಸೆಫ್ ನಗರದ ರಸ್ತೆಯಲ್ಲಿ ನಡೆದಿದೆ. ಬುದ್ಧಿಮಾಂದ್ಯ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳಲ್ಲಿ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು ಚಾಕು ತೋರಿಸಿ, ಹಲ್ಲೆ ನಡೆಸಿ, ಬೆದರಿಸಿದ್ದಾನೆ ಎನ್ನಲಾಗಿದೆ. ಬಳಿಕ ಅಪರಿಚಿತ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಸಹಾಯಕ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ್ದು, ಇಂತಹ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಆಗ್ರಹಪಡಿಸಿದ್ದಾರೆ.







