ಕಡೂರು: ವಾಹನದ ಹಿಂಬದಿಯ ಟಯರ್ ಸಿಡಿದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರದಂದು ಚಟ್ನಹಳ್ಳಿ ಸಮೀಪದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಗಿಡ್ಡು, ವಸೀಮ್ ಮತ್ತು ನರೇನ್ ಎನ್ನುವ ವ್ಯಕ್ತಿಗಳು ಕಳೆದ ಒಂದು ತಿಂಗಳಿನಿಂದ ಭದ್ರಾವತಿಯ ಸಮೀಪದಲ್ಲಿರುವ ಸಿಮೆಂಟ್ ಉತ್ಪನ್ನಗಳ ಖಾಸಗಿ ಘಟಕ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಬುಧವಾರದಂದು ಬೆಳಿಗ್ಗೆ ಮೂವರೂ ಕಡೂರಿನ ಮತ್ತೊಂದು ಘಟಕಕ್ಕೆ ತೆರಳಿ ಅಲ್ಲಿ ಸಿಮೆಂಟ್ ಬೆಂಚ್ ಮತ್ತು ಕಾಂಪೌಂಡ್ ಸ್ಲ್ಯಾಬ್ ಗಳನ್ನು ವಾಹನದಲ್ಲಿ ತುಂಬಿಸಿಕೊಂಡು, ಭದ್ರಾವತಿಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ವಾಹನದ ಹಿಂಬದಿಯ ಟಯರ್ ಏಕಾಏಕಿ ಸಿಡಿದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಮೂವರೂ ಸಿಮೆಂಟ್ ಸ್ಲ್ಯಾಬ್ ಗಳ ಸಮೇತ ಕೆಳಗೆ ಬಿದ್ದಿದ್ದು, ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತೋರ್ವ ವ್ಯಕ್ತಿಗೆ ಬಲಗಾಲಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ವಸೀಮ್ ಎನ್ನುವವರಿಗೆ ತಲೆಗೆ ಮತ್ತು ಬಲಗಾಲಿಗೆ ತೀವ್ರ ರೀತಿಯ ಗಾಯಗಳಾಗಿದ್ದು, ತಕ್ಷಣ ಮೂವರನ್ನು ತರೀಕೆರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಸೀಮ್ ಅವರು ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ನರಸಿಂಹರಾಜಪುರ: ಯುವಕ ಆತ್ಮಹತ್ಯೆಗೆ ಶರಣು!
ನರಸಿಂಹರಾಜಪುರ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಗುರುವಾರದಂದು ರಾವೂರ ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ಮನೆಬಿಟ್ಟು ತೆರಳಿದ್ದ ಯುವಕನು ರಾತ್ರಿಯಾದರೂ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ, ಭದ್ರಾ ಹಿನ್ನೀರಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಜಿ.ಆರ್.ಮಿಲ್ ರಸ್ತೆಯ ನಿವಾಸಿ ಸೈಯದ್ ಸಾಹಿಲ್ ಎಂದು ಗುರುತಿಸಲಾಗಿದೆ. ಯುವಕನ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸೈಯದ್ ಸಾಹಿಲ್ ಅವರ ದೊಡ್ಡಪ್ಪ ಸೈಯದ್ ಜಬೀವುಲ್ಲಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಹೊಸನಗರ: ರೆಸ್ಟೋರೆಂಟ್ ನಲ್ಲಿ ಮಚ್ಚು ತೋರಿಸಿ ಬೆದರಿಕೆ
•ಹೊಸನಗರ: ರೆಸ್ಟೋರೆಂಟ್ ಒಂದರಲ್ಲಿ ಸಿಗರೇಟ್ ವಿಚಾರಕ್ಕೆ ಮಾತುಕತೆ ನಡೆದು, ಬಳಿಕ ಅದು ಹಲ್ಲೆಗೆ ತಿರುಗಿದ ಘಟನೆ, ಕಳೆದೆರಡು ದಿನಗಳ ಹಿಂದೆ ನಗರ ಸಮೀಪದಲ್ಲಿ ನಡೆದಿದೆ. ಇಲ್ಲಿನ ನೂಲಿಗೇರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಊಟಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿಗಳು, ಊಟದ ಬಳಿಕ ಸಿಗರೇಟ್ ಅನ್ನು ಕೇಳಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅಪರಿಚಿತ ವ್ಯಕ್ತಿಗಳಲ್ಲಿ ಓರ್ವ ರೆಸ್ಟೋರೆಂಟ್ ನಿಂದ ಹೊರಗೆ ತೆರಳಿ ಮಚ್ಚನ್ನು ತೆಗೆದುಕೊಂಡು ಬಂದು ರೆಸ್ಟೋರೆಂಟ್ ನ ಮಾಲೀಕರಾದ ಆದಿರಾಜ್ ಅವರಿಗೆ ಬೆದರಿಕೆ ಹಾಕಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆದಿರಾಜ್ ಅವರು ಪಿಎಸ್ಐ ಶಿವಾನಂದ ಕೋಳಿ ಅವರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿ: ಓರ್ವ ಅರೆಸ್ಟ್!
ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ
ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿರುವ ಆರೋಪದಡಿ ಯುವಕನ ವಿರುದ್ಧ ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಭಟ್ರುಗದ್ದೆ ನಿವಾಸಿ ರಮೇಶ್ ಎಂಬಾತನಿಗೆ ಬಾಲಕಿಯ ಪರಿಚಯವಾಗಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಬಾಲಕಿಯ ಪೋಷಕರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ಬಂದಿದ್ದ ರಮೇಶ್ ಮದುವೆಯಾಗುವ ಭರವಸೆ ನೀಡಿ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ನಂತರವೂ ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಗಳ ಆರೋಗ್ಯದಲ್ಲಿ ಬದಲಾವಣೆ ಕಂಡು ಅನುಮಾನಗೊಂಡ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.







