ಎಸ್ಎಸ್ಎಲ್ಸಿ ಫಲಿತಾಂಶ: ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!
– ಪರೀಕ್ಷೆ ಜೀವನ ಅಲ್ಲ… ಕಡಿಮೆ ಅಂಕ ಬಂದ್ರೆ ತಲೆ ಕೆಡಿಸ್ಕೊಬೇಡಿ
– ಎಲ್ಲೆಲ್ಲಿ ಘಟನೆ: ಪೋಷಕರೇ ಮಕ್ಕಳ ಮೇಲೆ ಒತ್ತಡ ಹೆರಬೇಡಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆಗಳು ವರದಿಯಾಗಿವೆ. ಚಿತ್ರದುರ್ಗದಲ್ಲಿ, ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿ ಅಯಾನ್ ಬೇಗ್ (16) ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕನ್ನಡ ವಿಷಯದಲ್ಲಿ 125ಕ್ಕೆ 34 ಅಂಕ ಪಡೆದಿದ್ದರಿಂದ ಫೇಲ್ ಆಗಿದ್ದ ಅಯಾನ್, ಫಲಿತಾಂಶ ಪ್ರಕಟವಾದ ತಕ್ಷಣ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಶ್ರೀ ಗುರು ಮಲ್ಲೇಶ್ವರ ಖಾಸಗಿ ಶಾಲೆಯ ವಿದ್ಯಾರ್ಥಿನಿ ತ್ರಿಶಾಲಾ (16) ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ ಕಡಿಮೆ ಅಂಕ ಬಂದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತ್ರಿಶಾಲಾ 625ರಲ್ಲಿ 440 ಅಂಕ ಗಳಿಸಿದ್ದಳು. ಇನ್ನಷ್ಟು ಅಂಕ ನಿರೀಕ್ಷಿಸಿದ್ದ ಕಾರಣ ನಿರಾಶೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲೂ ಮತ್ತೊಂದು ದುರ್ಘಟನೆ ನಡೆದಿದೆ. ಕಿರಣ್ ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ತೆರಳಿದ್ದು, ಈಜು ಬಾರದ ಕಾರಣ ಮುಳುಗಿ ಮೃತಪಟ್ಟಿದ್ದಾನೆ. ಆತ 239 ಅಂಕಗಳೊಂದಿಗೆ ಪಾಸ್ ಆಗಿದ್ದಾನೆ ಎನ್ನಲಾಗಿದೆ.








