ಅಡಿಕೆ ತೋಟಕ್ಕೆ ಬಾಳೆ ಕೃಷಿ ಆಸರೆ..!
ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು
ಆಹಾರ, ಆರೋಗ್ಯ, ಸಂಪ್ರದಾಯ, ಧಾರ್ಮಿಕತೆಯಲ್ಲೂ ಸ್ಥಾನ
ಪೌಷ್ಟಿಕಾಂಶಭರಿತ ಬಾಳೆ ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸಾಯದೊಂದಿಗೆ ಬೆಸೆದುಕೊಂಡು ಬಂದಿದೆ. ಆದರೆ ಯಾವಾಗ ಇದಕ್ಕೆ ಮಾರುಕಟ್ಟೆ ಸಿಗುತ್ತದೆ, ಯಾವಾಗ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ನೀಡಲು 13 ತಿಂಗಳು ತೆಗೆದುಕೊಳ್ಳುವ ಬಾಳೆಯನ್ನು ವರ್ಷವಿಡೀ ಬೆಳೆಯ ಬಹುದು ಎಂಬುದೇ ಅದರ ಹೆಗ್ಗಳಿಕೆ. ಒಂಚೂರು ಲೆಕ್ಕಾಚಾರದೊಂದಿಗೆೆ ಮಾಡುವ ಬಾಳೆಕೃಷಿ ಖಂಡಿತ ಆದಾಯ ತರಬಲ್ಲದು. ಭಾರತದಲ್ಲಿ ಮಾವಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಕರ್ನಾಟಕದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಸುಮಾರು 98,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲಿ 50ಕ್ಕೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತಿದ್ದು ಕೆಳಗೆ ತಿಳಿಸಿದ ಪ್ರಮುಖ ತಳಿಗಳು ಕರ್ನಾಟಕದಲ್ಲಿ ಜನಪ್ರಿಯವಾಗಿವೆ.
ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ ಬಾಳೆ. ನಮ್ಮಲ್ಲಿ ಇಷ್ಟು ಬೆಳೆಯಿದ್ದರೂ ನಮ್ಮ ಗ್ರಾಹಕರಿಗೆ ಸ್ಥಳೀಯ ಉತ್ಪಾದನೆ ಸಾಕಾಗದೇ ಬೇರೆ ರಾಜ್ಯಗಳಿಂದ ಬಾಳೆಹಣ್ಣು ಆಮದಾಗುತ್ತಿದೆ. ಹಣ್ಣುಗಳ ಪಟ್ಟಿಯಲ್ಲಿ ಮಾವಿನ ನಂತರದ ಸ್ಥಾನ ಈ ಬಾಳೆಯದು. ತಾಜಾ ಹಣ್ಣು, ಚಿಪ್ಸು,ಒಣಹಣ್ಣು, ತರಕಾರಿ ಹೀಗೆ ವಿವಿಧ ರೂಪಗಳಲ್ಲಿ ನಮ್ಮ ಆಹಾರದ ಪಟ್ಟಿಯಲ್ಲೂ ಬಾಳೆಗೆ ಅಗ್ರಸ್ಥಾನ. ಇನ್ನು ಗ್ರಾಮೀಣ ಬದುಕಿನಲ್ಲಿ ಕೃಷಿ ಉದೇಶಕ್ಕೆ ಬಾಳೆ ನಾರು, ಊಟಕ್ಕೆ ಬಾಳೆ ಎಲೆ, ಹೈನು ರಾಸುಗಳಿಗೆ ಹಸಿ ಮೇವಾಗಿಕೂಡ ಈ ಬಾಳೆಗೆ ಪ್ರಾಮುಖ್ಯತೆ ಇದೆ. ಅಡಿಕೆಯ ಚಿಕ್ಕ ಸಸಿಗಳಿಗೆ ನೆರಳು ನೀಡಲು ಬಾಳೆ ಬೆಳೆಸಲಾಗುತ್ತದೆ. ಈ ಸಸ್ಯದ ಉಗಮ ಸ್ಥಾನ ದಕ್ಷಿಣ ಪೂರ್ವ ಏಷ್ಯಾ ಪ್ರದೇಶ. ಹಾಗಾಗಿ ನಮ್ಮ ನಾಗರೀಕತೆಯ ಆರಂಭದ ಕಾಲದಿಂದಲೂ ಈ ಬಾಳೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ ಎನ್ನಬಹುದು. ಬಾಳೆ ಎಂಬುದು ಧಾರ್ಮಿಕತೆ, ಸಂಪ್ರದಾಯದಲ್ಲೂ ಮಹತ್ವ ಪಡೆದುಕೊಂಡಿದೆ.








