ಮಂಜೂಷಾ ದೊಡ್ಡ ವಸ್ತು ಸಂಗ್ರಹಾಲಯ ನೋಡ ಬನ್ನಿ..!
ಧರ್ಮಸ್ಥಳದಲ್ಲಿದೆ ಭಾರತದ ದೊಡ್ಡ ವಸ್ತು ಸಂಗ್ರಹಾಲಯ
ಶತ ಶತಮಾನದ ವಸ್ತುಗಳ ಸಂಗ್ರಹ: ಡಾ.ವೀರೇಂದ್ರ ಹೆಗ್ಡೆ ಅವರ ವಿಶೇಷ ಕಾಳಜಿ
ಮಂಜೂಷಾ ವಸ್ತು ಸಂಗ್ರಹಾಲಯ ಭಾರತದ ಹೆಮ್ಮೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಇರುವ ವಿಶಿಷ್ಟ ವಸ್ತು ಸಂಗ್ರಹಾಲಯ ಲಕ್ಷ ಲಕ್ಷ ಜನರ ಮೆಚ್ಚುಗೆ ಗಳಿಸಿದೆ. 8000ಕ್ಕೂ ಹೆಚ್ಚು ಪುರಾತನ, ಕಲಾಕೃತಿ, ದೇವರ ವಿಗ್ರಹ, ಹಳೆಯ ವಸ್ತುಗಳು ಇಲ್ಲಿವೆ. ಜತೆಗೆ ಪುರಾತನ (ವಿಂಟೇಜ್) ಕಾರುಗಳು, ದೇವಾಲಯದ ರಥಗಳು ಮತ್ತು ಪ್ರಾಚೀನ ಕಲಾಕೃತಿಗಳು ಈ ವಸ್ತುಸಂಗ್ರಹಾಲಯವನ್ನು ಪ್ರದರ್ಶಿಸುತ್ತದೆ. ಮಂಜೂಷಾ ವಸ್ತುಸಂಗ್ರಹಾಲಯ ಖಾಸಗಿ ಒಡೆತನದಲ್ಲಿದೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲ್ವಿಚಾರಣೆಯಲ್ಲಿದೆ. 35 ವರ್ಷಗಳ ಕಾಲ ವಿಶೇಷ ಮುತುವರ್ಜಿವಹಿಸಿ ಸಂಗ್ರಹಿಸಿದ ಆಭರಣಗಳು, ವರ್ಣಚಿತ್ರಗಳು, ಶಿಲ್ಪಗಳು, ಕಾರುಗಳು, ಅಮೂಲ್ಯ ಕಲ್ಲುಗಳು ಮತ್ತು ಇತರ ಕಲಾಕೃತಿಗಳ ಅಪಾರ ಸಂಗ್ರಹ ಇಲ್ಲಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ಛಾಯಾಗ್ರಹಣದ ಉತ್ಸಾಹವು ಕ್ಯಾಮೆರಾ ಸಂಗ್ರಹದ ಪ್ರದರ್ಶನದಿಂದ ಕಂಡುಬರುತ್ತದೆ.
ಶತಮಾನದ ಹಳೆಯ ವಸ್ತುಗಳು ಇಲ್ಲಿವೆ..!
ಶತ ಶತಮಾನದ ಹಳೆಯ ಟಿವಿ, ರೆಕಾರ್ಡರ್, ಕ್ಯಾಮರಾ, ಸೇರಿ ಪ್ರತಿ ವಸ್ತುವೂ ಇಲ್ಲಿದೆ. ಮೌರ್ಯರ ಕಾಲದ ಕ್ರಿ.ಪೂ 1 ನೇ ಶತಮಾನದ ಟೆರಾಕೋಟಾ ನಾಣ್ಯಗಳು, 300 ವರ್ಷಗಳಷ್ಟು ಹಳೆಯದಾದ ವೀಣೆ (ಸಂಗೀತ ವಾದ್ಯ) ಮತ್ತು ವಿಲಕ್ಷಣ ವಿಂಟೇಜ್ ಕಾರುಗಳ ದೊಡ್ಡ ಪಡೆ ಮಂಜೂಷಾ ವಸ್ತುಸಂಗ್ರಹಾಲಯದ ಪ್ರಮುಖ ಆಕರ್ಷಣೆಯಾಗಿದೆ.
ದೇಶದಲ್ಲೇ ದಾಖಲೆ ನಿರ್ಮಿಸಿದ ಮ್ಯೂಸಿಯಂ!
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ರೂಪಿಸಿರುವ ‘ಮಂಜೂಷಾ’ ವಸ್ತುಸಂಗ್ರಹಾಲಯ ಇಂಡಿಯಾ ಬುಕ್ ಆಫ್ ರೆಕಾರ್ಡ್ನಿಂದ ವಿಶೇಷ ಮಾನ್ಯತೆ ಪಡೆದಿದೆ. ನವದೆಹಲಿಯಲ್ಲಿರುವ ಸಂಸ್ಥೆಯ ಮುಖ್ಯಸ್ಥ ಅನಿಲ್ ಕುಮಾರ್ ಶರ್ಮ ಅವರು ನವೆಂಬರ್ 2024 ರಂದು ಹೆಗ್ಗಡೆ ಅವರಿಗೆ ಪ್ರಮಾಣಪತ್ರ ನೀಡಿದ್ದಾರೆ. ‘ಒಬ್ಬರೇ ವ್ಯಕ್ತಿ 50 ವರ್ಷಗಳಲ್ಲಿ ನಮ್ಮ ಇತಿಹಾಸ, ಕಲೆ, ಸಂಸ್ಕೃತಿ, ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಟ ಕಾರ್ಯವಾಗಿದೆ’ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ನೀವು ಜೀವನದಲ್ಲಿ ಒಮ್ಮೆ ಭೇಟಿ ನೀಡಬೇಕಾದ ಸ್ಥಳ ಇದಾಗಿದೆ.
ಹಳೆಯ ಕಾಲದ ಕಾರು, ಲಾರಿ, ಜೀಪು ಇಲ್ಲಿದೆ!
ಕೊಂಚವೇ ದೂರದಲ್ಲಿ ಸುಮಾರು 50 ವಿವಿಧ ಕಾರುಗಳ ಸಂಗ್ರಹವನ್ನೂ ಮಾಡಲಾಗಿದ್ದು ಕಾರು ಸಂಗ್ರಹಾಲಯದಲ್ಲಿ ಪುರಾತನ ವಾಹನಗಳು ಮತ್ತು ಕಾರುಗಳನ್ನು ಸಂಗ್ರಹಿಸಿ ಇಡಲಾಗಿದ್ದು ಹೆಚ್ಚಿನವು ಇಂದಿಗೂ ಚಾಲ್ತಿಯಲ್ಲಿವೆ ಎಂಬುದು ವಿಶೇಷ ಸಂಗತಿ. ವಸ್ತು ಸಂಗ್ರಹಾಲಯದಲ್ಲಿ ಮನುಸ್ಮ್ರತಿಯ 6000 ತಾಳೆ ಎಲೆ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವಿದೆ. ಕ್ಲಾಸಿಕ್ ಕಾರುಗಳ ಸಂಗ್ರಹ ವಸ್ತು ಸಂಗ್ರಹವು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ ಮತ್ತು ಪಾಂಟಿಯಾಕ್, ಚೆವ್ರೊಲೆಟ್, ಕ್ಯಾಡಿಲಾಕ್, ಮೋರಿಸ್ ಮತ್ತು ಆಸ್ಟಿನ್ ನಂತಹ ಹಲವಾರು ಕ್ಲಾಸಿಕ್ಗಳನ್ನು ಒಳಗೊಂಡಿದೆ. ಎಲ್ಲಾ ಕಾರುಗಳು ಕಮಾನುಗಳಲ್ಲಿ ದೃಢವಾಗಿ ಸುತ್ತುವರಿಯಲ್ಪಟ್ಟಿವೆ ಮತ್ತು ಪ್ರತಿಯೊಂದರ ವಿವರಗಳನ್ನು ನೀಡುವ ಮಾಹಿತಿ ಫಲಕಗಳನ್ನು ಅಂದವಾಗಿ ಪ್ರದರ್ಶಿಸಲಾಗುತ್ತದೆ.
ಜಯಚಾಮರಾಜೇಂದ್ರ ಒಡೆಯರ್ಗೆ ಸೇರಿದ ಕಾರು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಒಡೆತನದ ವಿಂಟೇಜ್ ಕಾರ್ ಮ್ಯೂಸಿಯಂ ಇದೆ. ಪ್ರವೇಶ ಶುಲ್ಕ ಬರೀ 3ರೂ. ಇಲ್ಲಿ ಪ್ರದರ್ಶಿಸಲಾದ ಅನೇಕ ಕಾರುಗಳು ಒಂದು ಕಾಲದಲ್ಲಿ ವಿಐಪಿಗಳ ಒಡೆತನದಲ್ಲಿದ್ದವು. ಉದಾಹರಣೆಗೆ, ಯುಕೆ ತಯಾರಿಸಿದ ಡೈಮ್ಲರ್ ಡಬಲ್ ಸಿಕ್ಸ್, ಅದು ಮೈಸೂರಿನ ಹಿಂದಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಸೇರಿತ್ತು ಈ ಹಲವಾರು ಕಾರುಗಳನ್ನು ಕರ್ನಾಟಕದ ಪ್ರಸಿದ್ಧ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹೊಂದಿದ್ದರು. ಗಾಂಧೀಜಿಯವರು ಬಳಸಿದ ಕಾರು ದಂತ-ಬಣ್ಣದ ಸ್ಟೂಡ್ಬೇಕರ್ 1929 ಮಾದರಿಯನ್ನು ಇಲ್ಲಿ ಕಾಣಬಹುದಾಗಿದೆ. ಇದನ್ನು ಒಮ್ಮೆ ಗಾಂಧೀಜಿಯವರು ತಮ್ಮ ರಾಜ್ಯ ಪ್ರವಾಸದಲ್ಲಿ ಬಳಸಿದ್ದರು. ನಿಯಮಿತವಾಗಿ ಪುನಃಸ್ಥಾಪನೆಯ ನಂತರ ಹೊಸ ಕಾರುಗಳನ್ನು ಸೇರ್ಪಡೆಗೊಳಿಸಲಾಯಿತು. ಸಂಗ್ರಹವು ಬೃಹದಾಕಾರವಾಗಿ ಬೆಳೆಯುತ್ತಿದೆ.
ಖ್ಯಾತ ಕಲಾವಿದರ ಕೊಡುಗೆ
ಮೈಸೂರಿನ ಖ್ಯಾತ ಕಲಾವಿದ ಮತ್ತು ಜಾನಪದ ಲೇಖಕ ಪಿ.ಆರ್.ತಿಪ್ಪೇಸ್ವಾಮಿ ಈ ವಸ್ತುಸಂಗ್ರಹಾಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಿವಂಗತ ತಿಪ್ಪೇಸ್ವಾಮಿ ಅವರ ಗೌರವಾರ್ಥ ಅವರ ಕೆಲವೊಂದು ವರ್ಣ ಚಿತ್ರಗಳನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಮಂಜೂಶ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಈ ಇಬ್ಬರು ಜನರ ಸಂಯೋಜಿತ ಪ್ರಯತ್ನದಿಂದಾಗಿ ಮ್ಯೂಸಿಯಂ ಸ್ಥಾಪನೆಗೆ ಕಾರಣವಾಯಿತು.
ಈ ವಸ್ತುಸಂಗ್ರಹಾಲಯವು ಕ್ರಿ.ಪೂ 1 ನೇ ಶತಮಾನದಷ್ಟು ಹಳೆಯದಾದ ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳನ್ನು ಸಂರಕ್ಷಿಸಿ ಇಡಲಾಗಿದೆ.
ಇದು ಮಂಜುನಾಥ ಸ್ವಾಮಿ ದೇವಸ್ಥಾನ, 300 ವರ್ಷ ಹಳೆಯ ವೀಣೆ, ವಿಧ್ವಾನ್ ವೀಣೆ, ಶೇಷಣ್ಣ ಅವರ ಸಂಗೀತ ವಾದ್ಯಗಳ ವಿವರಗಳನ್ನು ಹೊಂದಿರುವ ಪುರಾತನ ಪುಸ್ತಕವನ್ನು ಸಂಗ್ರಹಿಸಿಡಲಾಗಿದೆ. ಇದು ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಕಲೆ, ವರ್ಣಚಿತ್ರಗಳು, ಆಭರಣ ವಸ್ತುಗಳು, ಪೂಜಾ ವಸ್ತುಗಳು ಮತ್ತು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿದೆ. ವಿಭಿನ್ನ ಗಾತ್ರದ ಕ್ಯಾಮೆರಾಗಳು ಮುಂತಾದ ಹಲವಾರು ವಿಭಿನ್ನ ಪುರಾತನ ವಸ್ತುಗಳನ್ನು ವಿಶಾಲವಾದ ಜಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೇವಲ 20 ರೂಪಾಯಿ ಪ್ರವೇಶ ಶುಲ್ಕವನ್ನು ಪಾವತಿಸಿ, ಸುಮಾರು ಎರಡು ಗಂಟೆಗಳ ಕಾಲ ವೀಕ್ಷಿಸಬಹುದಾದಷ್ಟು ವಿಶೇಷ ವಸ್ತುಗಳನ್ನು ಈ ಸಂಗ್ರಹಾಲಯ ಹೊಂದಿದೆ.








