ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಆರೋಪಿಗೆ ಜೈಲು!
– ತೀರ್ಥಹಳ್ಳಿ ಮೂಲದ ಅರಾಫತ್ ಅಲಿಗೆ 6 ವರ್ಷ ಜೈಲುವಾಸ
– ಕೀನ್ಯಾದಲ್ಲಿ ಬಂಧನ: ಕದ್ರಿ ದೇವಸ್ಥಾನ ಸ್ಫೋಟದ ಸಂಚುಕೋರ
ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾದ ಅರಾಫತ್ ಅಲಿಗೆ ಎನ್ಐಎ ವಿಶೇಷ ನ್ಯಾಯಾಲಯವು 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಶಿವಮೊಗ್ಗದ ತುಂಗಾ ನದಿ ತೀರದಲ್ಲಿ 2022ರಲ್ಲಿ ನಡೆದ ಐಇಡಿ ಬಾಂಬ್ ಪ್ರಾಯೋಗಿಕ ಸ್ಫೋಟದ (ಟ್ರಯಲ್ ಬ್ಲಾಸ್ಟ್) ಸಂಚಿನ ಹಿಂದೆ ಐಸಿಸ್ ಪ್ರೇರಿತ ದೊಡ್ಡ ಜಾಲವೇ ಕೆಲಸ ಮಾಡಿತ್ತು. ಡಾರ್ಕ್ ವೆಬ್ ಮೂಲಕ ಸ್ಫೋಟಕ ತಯಾರಿಕೆ ಕಲಿತಿದ್ದ ಆರೋಪಿಗಳು, ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಎನ್ಐಎ ಬಂಧಿಸಿದ್ದು, ಇದು ಕೇವಲ ಒಂದು ಸ್ಫೋಟಕ್ಕೆ ಸೀಮಿತವಾಗಿರದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಮತ್ತು ಗೋಡೆ ಬರಹಗಳಂತಹ ಇತರ ದೇಶವಿರೋಧಿ ಘಟನೆಗಳೊಂದಿಗೂ ನಿಕಟ ಸಂಪರ್ಕ ಹೊಂದಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಇಡೀ ಜಾಲದ ಮಾಸ್ಟರ್ ಮೈಂಡ್ ಆಗಿದ್ದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ, 2020 ರಿಂದಲೇ ನಾಪತ್ತೆಯಾಗಿ ಕೀನ್ಯಾದಲ್ಲಿ ತಲೆಮರೆಸಿಕೊಂಡಿದ್ದನು. ಅಲ್ಲಿ ನಕಲಿ ದಾಖಲೆಗಳ ಮೂಲಕ ನೆಲೆಸಿದ್ದ ಈತ, ಸ್ಥಳೀಯ ಆರೋಪಿಗಳಾದ ಶಾರಿಕ್ ಮತ್ತು ಮಾಜ್ ಮುನೀರ್ಗೆ ವಿದೇಶದಿಂದಲೇ ಹಣಕಾಸು ಹಾಗೂ ತಾಂತ್ರಿಕ ಪ್ರಚೋದನೆ ನೀಡುತ್ತಿದ್ದನು. 2023ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಕೈಗೆ ಸಿಕ್ಕಿಬಿದ್ದ ಈತನಿಗೆ ಈಗ ನ್ಯಾಯಾಲಯವು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಈ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಪೂರಕವಾಗಿದ್ದ ಪ್ರಮುಖ ಕೊಂಡಿಯೊಂದಕ್ಕೆ ಕಡಿವಾಣ ಬಿದ್ದಂತಾಗಿದೆ.








