ಯುದ್ಧದ ಪರಿಣಾಮ; ರಬ್ಬರ್ ಬೆಲೆಯಲ್ಲಿ ಏರಿಕೆ!
– ಮಲೆನಾಡ ಅನೇಕ ಭಾಗದಲ್ಲಿ ರಬ್ಬರ್ ಬೆಳೆ
– ಅಡಿಕೆಗೆ ಹೋಲಿಸಿದರೆ ಖರ್ಚು ಕಡಿಮೆ, ಆದ್ರೆ ಬೆಲೆ ಆಸ್ಪಷ್ಟ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನರಸಿಂಹರಾಜಪುರ: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯ ಪರಿಣಾಮವಾಗಿ ಕಳೆದ ತಿಂಗಳಿನಿಂದ ರಬ್ಬರ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದು ಅಳಿದುಳಿದ ರಬ್ಬರ್ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ದಶಕಗಳ ಹಿಂದೆ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕಲ್ಲಿ ರಬ್ಬರ್ ಬೆಳೆಯಲಾಗಿತ್ತು. ಆದರೆ ಕಳೆದ 18 ವರ್ಷಗಳಿಂದ ರಬ್ಬರ್ ಗೆ ಯಾವುದೇ ರೀತಿಯ ಬೆಲೆ ಇಲ್ಲದ್ದರಿಂದ ರಬ್ಬರ್ ಮರಗಳನ್ನು ಕಡಿದು, ಅಡಿಕೆಯ ಬೆಲೆ ಹೆಚ್ಚಳವಾಗಿದ್ದಾರ ಕಾರಣ ಬಹುತೇಕ ಜನರು ಅದನ್ನು ಅಡಿಕೆ ತೋಟವನ್ನಾಗಿ ಪರಿವರ್ತಿಸಿದ್ದರು. ಈಗ ಕೆಲವು ಕಡೆ ಮಾತ್ರ ರಬ್ಬರ್ ತೋಟಗಳು ಕಾಣುತ್ತಿವೆ.
ಅಡಿಕೆಗೆ ಹೋಲಿಸಿದರೆ ಬೆಲೆ ಕಡಿಮೆ!.. ಆದ್ರೆ ಖರ್ಚು ಇಲ್ಲ!
ಅಡಿಕೆ ಬೆಲೆಗೆ ಹೋಲಿಸಿದರೆ ರಬ್ಬರ್ ಬೆಲೆ ಕಡಿಮೆಯೇ ಇದೆ. ಆದರೆ ರಬ್ಬರ್ ಬೆಳೆಗೆ ನೀರಿನ ಅವಶ್ಯಕತೆ ಇಲ್ಲ ಮತ್ತು ಕೂಲಿ ಖರ್ಚು ಕೂಡ ಕಡಿಮೆ ಪ್ರಮಾಣದಲ್ಲಿದೆ. ರಬ್ಬರ್ ಟ್ಯಾಪಿಂಗ್ ಅನ್ನು ಸರಿಯಾಗಿ ಮಾಡಿದರೆ, ರಬ್ಬರ್ ತೋಟದಲ್ಲೇ ಉತ್ತಮ ಆದಾಯವನ್ನು ಗಳಿಸಬಹುದು ಎಂದು ಬೆಳೆಗಾರರೊಬ್ಬರು ತಮ್ಮ ಅನುಭವದ ಮಾತನ್ನು ಹೇಳಿದ್ದಾರೆ. ಆದರೆ, ಧಾರಣೆಯಲ್ಲಿ ಕುಸಿತ ಕಂಡುಬಂದಲ್ಲಿ ಬಹುತೇಕ ರಬ್ಬರ್ ತೋಟಗಳು ನಾಶವಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಸಿಂಥೆಟಿಕ್ ಮತ್ತು ನ್ಯಾಚುರಲ್ ರಬ್ಬರ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರಸ್ತುತ ಒಂದು ಕೆಜಿ ರಬ್ಬರ್ ಗೆ 226 ರೂಪಾಯಿ ಬೆಲೆ ಇದೆ ಎನ್ನುವ ಮಾಹಿತಿ ಲಭಿಸಿದೆ.








