ಬೆಜ್ಜವಳ್ಳಿಯ ಮಲೆನಾಡು ಆಂಗ್ಲಮಾಧ್ಯಮ ಶಾಲೆಗೆ ಎಸ್ಎಸ್ಎಲ್ಸಿಯಲ್ಲಿ ಶೇ. 100 ಫಲಿತಾಂಶ
– ಮಲೆನಾಡ ಮಡಿಲಲ್ಲಿ ಶೈಕ್ಷಣಿಕ ಸಂಭ್ರಮ
– ಬೆಜ್ಜವಳ್ಳಿ ಶಾಲೆಗೆ ‘ಎ’ ಶ್ರೇಣಿಯ ಗರಿ
ತೀರ್ಥಹಳ್ಳಿ: ತಾಲೂಕಿನ ಬೆಜ್ಜವಳ್ಳಿಯ ಶ್ರೀ ಮಲೆನಾಡು ಆಂಗ್ಲಮಾಧ್ಯಮ ಸಂಯುಕ್ತ ಪ್ರೌಢಶಾಲೆಯು 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಶಾಲೆಯ ಒಟ್ಟು ಫಲಿತಾಂಶದಲ್ಲಿ 08 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction), 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ವರ್ಣಿಕ ಎಂ . 591 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಈಕ್ಷಾ ಡಿ.ಎಂ 583 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪ್ರತೀಕ್ಷ ಡಿ.ಪಿ 572 ಅಂಕಗಳನ್ನು ಪಡೆದಿದ್ದಾರೆ.
ಗುಣಮಟ್ಟದ ಶಿಕ್ಷಣದ ಜೊತೆಗೆ ಕಂಪ್ಯೂಟರ್, ಯೋಗ, ಭರತನಾಟ್ಯ ಮತ್ತು ಕರಾಟೆಯಂತಹ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡುತ್ತಿರುವ ಶಾಲೆಯು ಈ ಬಾರಿ ‘ಎ’ ಶ್ರೇಣಿಯ ಸಾಧನೆ ಮಾಡಿದೆ. ಈ ಯಶಸ್ಸಿಗೆ ಕಾರಣರಾದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ವೃಂದವನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.








