ದೇವಸ್ಥಾನಕ್ಕೆ ಹೋಗಿದ್ದ ಬಾಲಕನ ತಿಂದ ಚಿರತೆ!
– ಚಾಮರಾಜ ನಗರದಲ್ಲಿ ಮನಕಲಕುವ ದುರಂತ
– ರಾಜ್ಯದಲ್ಲಿ ಕಾಡು ಆನೆ ಆಯ್ತು, ಈಗ ಚಿರತೆ ಕಾಟ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಾಮರಾಜನಗರ: ಚಾಮರಾಜನ ಗರದಲ್ಲಿ ಮನಕಲಕುವ ದುರಂತ ನಡೆದಿದ್ದು, ಮಲೆ ಮಾದೇಶ್ವರ ಬೆಟ್ಟದ ಸಮೀಪ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾಗಿದ್ದಾನೆ. ಭಕ್ತಿ ಭಾವದಿಂದ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬದ ಸಂತಸದ ಕ್ಷಣವೇ ಕ್ಷಣಾರ್ಧದಲ್ಲಿ ಶೋಕ ಸಾಗರವಾಗಿ ಮಾರ್ಪಟ್ಟಿರುವ ಮನ ಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ 10 ವರ್ಷದ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದು, ಈ ದುರ್ಘಟನೆ ರಾಜ್ಯಾದ್ಯಂತ ಆತಂಕ ಮತ್ತು ದುಃಖಕ್ಕೆ ಕಾರಣವಾಗಿದೆ. ಮೃತ ಬಾಲಕನನ್ನು ಬೆಂಗಳೂರಿನ ನಿವಾಸಿ ಸುರೇಶ್ ಅವರ ಪುತ್ರ ಹರ್ಷಿತ್ (10) ಎಂದು ಗುರುತಿಸಲಾಗಿದೆ.
ದೇವರ ದರ್ಶನದ ಬಳಿಕ ಸಂಭವಿಸಿದ ದುರಂತ!
ಕುಟುಂಬದವರು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಗಮಲೆ ಕಡೆಗೆ ತೆರಳುತ್ತಿದ್ದರು. ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಇಂಡಿಗನತ್ತ ಅರಣ್ಯ ಪ್ರದೇಶದ ಬಳಿ ಸಾಗುತ್ತಿದ್ದಾಗ, ಅರಣ್ಯದೊಳಗಿಂದ ಏಕಾಏಕಿ ಹೊರಬಂದ ಚಿರತೆ ಬಾಲಕನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಕುಟುಂಬದವರು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಚಿರತೆ ಬಾಲಕನನ್ನು ಎಳೆದುಕೊಂಡು ಅರಣ್ಯದೊಳಗೆ ಕೊಂಡೊಯ್ದಿದೆ. ಬಾಲಕನನ್ನು ರಕ್ಷಿಸಲು ಕುಟುಂಬದವರು ಕಿರುಚಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಕಣ್ಣೆದುರೇ ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ದೇವರ ದರ್ಶನಕ್ಕಾಗಿ ಬಂದಿದ್ದ ಕುಟುಂಬಕ್ಕೆ ಎದುರಾದ ಈ ದುರಂತ ಕಂಡು ಭಕ್ತರು ಹಾಗೂ ಸ್ಥಳೀಯರು ತೀವ್ರ ದುಃಖ ವ್ಯಕ್ತಪಡಿಸಿದರು.
ಎಚ್ಚರಿಕೆ ಸೂಚನೆ
ರಾಜ್ಯದ ಹಲವು ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವ ವೇಳೆ ಮಕ್ಕಳನ್ನು ಒಂಟಿಯಾಗಿ ಬಿಡಬಾರದು, ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಜೊತೆಗೆ ಅರಣ್ಯ ಅಂಚಿನ ಗ್ರಾಮಗಳಲ್ಲಿ ಗಸ್ತು ಬಲಪಡಿಸುವುದು, ಎಚ್ಚರಿಕೆ ಫಲಕ ಅಳವಡಿಸುವುದು ಹಾಗೂ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ರಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.








