ಭಾರತ ಚಿತ್ರರಂಗದಲ್ಲಿ ಅಜನೀಶ್ ಮಿಂಚಿಂಗ್..!
ಕಾಂತಾರ ಮೂಲಕ ಸಂಗೀತದ ಮೋಡಿ ಮಾಡಿದ ಮಲೆನಾಡ ಮಾಂತ್ರಿಕ
ಶಿವಮೊಗ್ಗ ಜಿಲ್ಲೆ ಭದ್ರಾವತಿ ಹುಡುಗನ ಸಾಧನೆಯ ಪಯಣ
ಅಪ್ಪನ ಆರ್ಕೆಸ್ಟ್ರಾ ನೋಡಿ ಮಗ ಸಂಗೀತ ಸಾಧಕನಾಗಿದ್ದು ರೋಚಕ
ಕಾಂತಾರ ಮೂಲಕ ಸಂಗೀತದ ಮೋಡಿ ಮಾಡಿದ ಮಲೆನಾಡ ಮಾಂತ್ರಿಕ ಶಿವಮೊಗ್ಗ ಜಿಲ್ಲೆ ಭದ್ರಾವತಿ ಹುಡುಗ ಅಜನೀಶ್ ಲೋಕನಾಥ್. ಅಜನೀಶ್ ಲೋಕನಾಥ್ ಅವರು 20 ನವೆಂಬರ್ 1986ರಲ್ಲಿ ಭದ್ರಾವತಿಯಲ್ಲಿ ಜನಿಸಿದರು. ತಂದೆ ಖ್ಯಾತ ಸಂಗೀತ ನಿರ್ದೇಶಕ ಲೋಕನಾಥ್. ಅಜ್ಜಿ ಮತ್ತು ತಾಯಿ ಕೂಡ ಗಾಯಕರಾಗಿದ್ದ ಕಾರಣ ಅಜನೀಶ್ ಅವರ ಮೇಲೆ ಸಂಗೀತದ ಪ್ರಭಾವ ಅಧಿಕವಾಗಿತ್ತು. ಭದ್ರಾವತಿಯ ವಿಶ್ವೇಶ್ವರಯ್ಯ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪೇಪರ್ ಟೌನ್ ನಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಮನೆಯಲ್ಲಿ ತಂದೆಯ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದರು. ತಂದೆಯೇ ಮೊದಲ ಸಂಗೀತದ ಗುರು ಆದರು. ಸಂಗೀತದ ಹೆಚ್ಚಿನ ಕಲಿಕೆಗಾಗಿ ಲೋಕನಾಥ್ ಅವರು ಮಗನನ್ನು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ತರಗತಿ ನಡೆಸುತ್ತಿದ್ದ ಸಂಗೀತ ಶಿಕ್ಷಕ ರಾಜು ಮಾಸ್ತರ್ ಅವರ ಬಳಿ ಕಳಿಸಿದರು. ಇಲ್ಲಿ ಅಜನೀಶ್ ಪಾಶ್ಚಾತ್ಯ ಮತ್ತು ಶಾಸ್ತ್ರೀಯ ಸಂಗೀತವನ್ನು ಕಲಿತರು.
ಕೆ. ಕಲ್ಯಾಣ್ ಗರಡಿಯಲ್ಲಿ ಬೆಳೆದ ಅಜನೀಶ್
ಬಾಲ್ಯದಲ್ಲಿ ತಂದೆಯ ಸಂಗೀತ ಕಛೇರಿಗಳಲ್ಲಿ ಕೀಬೋರ್ಡ್ ನುಡಿಸುತ್ತಿದ್ದ ಅಜನೀಶ್ ಬೆಂಗಳೂರಿಗೆ ಬಂದು ತಂದೆಯ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ಪಕ್ಕಾ ವಾದ್ಯಗಾರರಾಗಿ ಕಾರ್ಯಕ್ರಮಗಳನ್ನು ನೀಡಿದರು. ಆಗ ಇವರಿಗೆ ಕೆ. ಕಲ್ಯಾಣ್ ಅವರ ಗರಡಿ ಲಭಿಸಿತು. ಅಜನೀಶ್ ಅವರ ಸಂಗೀತ ಸಂಯೋಜನೆಯ ಮೊದಲ ಚಿತ್ರ ‘ಶಿಶಿರ’. ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ ನನ್ನ ಲೈಫ್ ಅಲ್ಲಿ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದರು. ಇದನ್ನು ಗುರುತಿಸಿದ ರಕ್ಷಿತ್ ಶೆಟ್ಟಿ ಅವರು ತಮ್ಮ ಕಿರುಚಿತ್ರವೊಂದಕ್ಕೆ ಅವಕಾಶ ನೀಡಿದರು.ಬಳಿಕ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಸಂಗೀತ ನಿರ್ದೇಶನದ ಜವಾಬ್ದಾರಿ ನೀಡಿದರು.ನಂತರ ಅಜನೀಶ್ ಹಿಂತಿರುಗಿ ನೋಡಿದ್ದಿಲ್ಲ. ಇದಕ್ಕೂ ಮೊದಲು ಅವರಿಗೆ ಮಾಧ್ಯಮದವರು ನೀಡುವ ಕೆ.ಆರ್.ಪುರಂ ಪ್ರಶಸ್ತಿ ಲಭಿಸಿತ್ತು.
ಕಿರಿಕ್ ಪಾರ್ಟಿ, ರಂಗಿ ತರಂಗದ ಮೂಲಕ ಹೊಸ ಎಂಟ್ರಿ!
ವಾಸ್ಕೋಡಿಗಾಮ, ಸಿನಿಮಾ ಮೈ ಡಾರ್ಲಿಂಗ್, ಇಷ್ಟಕಾಮ್ಯ, ರಂಗಿತರಂಗ, ಕಿರಿಕ್ ಪಾರ್ಟಿ, ಡಾ.ಶಿವರಾಜಕುಮಾರ್ ಅವರ ಅಭಿನಯದ ಶ್ರೀಕಂಠ ಹೀಗೆ ಸಾಲು ಸಾಲು ಚಿತ್ರಗಳಿಗೆ ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಮಾಡಿದರು. ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ನಿರ್ದೇಶನ ಮಾಡಬೇಕೆಂಬುದು ಅಜನೀಶ್ ಅವರ ಕನಸು. ಇವರ ಸಂಗೀತ ನಿರ್ದೇಶನದ ಮೆಚ್ಚಿನ ಚಿತ್ರ ಇಷ್ಟಕಾಮ್ಯ.








