ರಾಜ್ಯದಲ್ಲಿ ಮನೆ ಗಣತಿ ಶುರು!
– ಜನ ಗಣತಿಗೆ ಬಂದಾಗ ಮಾಹಿತಿ ನೀಡಿ ಸಹಕರಿಸಿ
– ಸಂಬಳ, ಸಹಾಯ ಧನ, ಸೌಲಭ್ಯ ನೀಡಲು ಸರ್ಕಾರಕ್ಕೆ ಪಟ್ಟು
ವಿಶೇಷ ವರದಿ: ರಚನಾ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ದೇಶದಲ್ಲಿ ಜನ ಮತ್ತು ಮನೆ ಗಣತಿ ಶುರುವಾಗಿದೆ. ಏಪ್ರಿಲ್ 19ರ ಭಾನುವಾರದಿಂದ ಪ್ರತಿ ಮನೆಗೂ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮತ್ತು ಪಂಚಾಯತ್ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಮೊದಲು ಮನೆ ಗಣತಿ ಮಾಡಲಿದ್ದು ಮನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಬಳಿಕ ಜನ ಗಣತಿ ನಡೆಯಲಿದೆ.
ಏನೇನು ಮಾಹಿತಿ ನೀಡಬೇಕು?
ಗಣತಿ ದೇಶದ ಅಭಿವೃದ್ಧಿಗಾಗಿ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವಾಗಿರುವ ಕಾರಣ ಸಾರ್ವಜನಿಕರು ಮನೆಯ ಯಜಮಾನನ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಅಧಿಕಾರಿಗಳು ಬಂದಾಗ ಹುಡುಕಿ ಇಬ್ಬರ ಸಮಯವನ್ನು ವ್ಯರ್ಥಗೊಳಿಸಿಕೊಳ್ಳುವ ಬದಲು ಹಿಂದೆ ಬರೆದಿಟ್ಟುಕೊಳ್ಳಿ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ತಕ್ಷಣ ಮತ್ತು ನಿಖರವಾದ ಉತ್ತರಗಳನ್ನು ನೀಡತಕ್ಕದ್ದು, ಮನೆಗೆ ಬರುವ ಅಧಿಕಾರಿಗಳ ಬಳಿ ಅಸಮಾಧಾನವನ್ನು ವ್ಯಕ್ತಪಡಿಸದೆ ನಿಮ್ಮ 24 ಗಂಟೆಗಳಲ್ಲಿ 10 ನಿಮಿಷ ಮೀಸಲಿಡಿ.
ಸರ್ಕಾರದ ಬಗ್ಗೆ ದೂರು ಹೇಳುವುದು ನಿಶಿದ್ಧ!
ಸರ್ಕಾರಕ್ಕೆ ಸಂಬಂಧಿಸಿದ ದೂರುಗಳನ್ನು ಅವರ ಬಳಿ ಹೇಳಿಕೊಳ್ಳುವುದು ಸರಿಯಲ್ಲ, ಅವರು ಕೇವಲ ಸಾರ್ವಜನಿಕರ ಮಾಹಿತಿಗಳನ್ನು ಪಡೆಯಲು ಬಂದಿರುತ್ತಾರೆಯೇ ಹೊರತು ಸಮಸ್ಯೆಗಳನ್ನು ಬಗೆಹರಿಸಲು ಅಲ್ಲ. ಅಧಿಕಾರಿಗಳು ಬಂದ ಸಂದರ್ಭದಲ್ಲಿ ಮನೆಯಲ್ಲಿ ನಾಯಿ ಇದ್ದರೆ ಕಟ್ಟಿ ಹಾಕುವುದು, ಇಲ್ಲದಿದ್ದರೆ ಮನೆಯವರು ಹೊರಗಡೆ ಬಂದು ಮಾಹಿತಿ ನೀಡುವುದು ಮಾಡಬೇಕು.
ಗಣತಿದಾರರಿಗೆ ಬಿಸಿಲಿನ ಶಾಕ್!
ಬಿಸಿಲಿನ ಬೇಗೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಒಳ್ಳೆಯ ಮಾತುಗಳನ್ನಾಡಿ, ಕುಳಿತುಕೊಳ್ಳಲು ತಿಳಿಸಿ, ಕುಡಿಯಲು ನೀರು ಕೊಟ್ಟು ಹೃದಯವಂತಿಕೆ ಮೆರೆಯಿರಿ. ಯಾವುದಾದರೂ ಮನೆಗೆ ಬಂದ ಸಂದರ್ಭದಲ್ಲಿ ಮತ್ತೊಂದು ಮನೆಯವರ ವಿಳಾಸವನ್ನು ಕೇಳಿದರೆ ಸರಿಯಾಗಿ ಮಾರ್ಗದರ್ಶನ ನೀಡಿ ಎಂದು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಹಕಾರ ನೀಡಬೇಕೆಂದು ತಿಳಿಸಲಾಗಿದೆ.
ಸಂಬಳ, ಸಹಾಯ ಧನ ನೀಡಲು ಸರ್ಕಾರಕ್ಕೆ ಪಟ್ಟು ಜನ ಗಣತಿಗೆ ಶಾಲಾ ಶಿಕ್ಷಕರು ಬಳಕೆ ಮಾಡಲಾಗಿದೆ. ಅವರಿಗೆ ಸರಿಯಾದ ವೇತನ, ಸಹಾಯ ಧನ, ಸೌಲಭ್ಯ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ.








