ಭರತ ನಾಟ್ಯದ ನಾಟ್ಯ ರಾಣಿ ರೆಮೋನಾ!
– ತಂದೆ ಕಳೆದುಕೊಂಡರೂ ಅಮ್ಮನ ನೆರಳಲ್ಲಿ ಬೆಳೆದು ಸಾಧನೆ
– ಯುವ ಜನತೆಗೆ ಮಾದರಿ ಆದಳು ಮಂಗಳೂರು ಹುಡುಗಿ
ರೆಮೋನಾ ಪೆರೆರ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ತನ್ನ ಕಲೆ ಮೂಲಕವೇ ಗುರುತಿಸಿಕೊಂಡ ಪ್ರತಿಭಾವಂತೆ. ಈಕೆ ಸತತ 170 ಗಂಟೆಗಳ ಕಾಲ ನೃತ್ಯವನ್ನು ಪ್ರದರ್ಶಿಸುವ ಮೂಲಕ, ವಿಶ್ವ ದಾಖಲೆ ನಿರ್ಮಿಸಿದ ಸಾಧಕಿ.
ತಂದೆಯ ಕಳೆದುಕೊಂಡವಳಿಗೆ ತಾಯಿಯೇ ಪ್ರೇರಣೆ!
ರೆಮೋನಾ ಪೆರೆರ ಅವರು 2005ರ ನವೆಂಬರ್ 4ರಂದು ಜನಿಸಿದರು. ತಾಯಿಯ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡ ರೆಮೋನಾಗೆ ಆ ಕೊರತೆ ಬಾರದಂತೆ ತಂದೆ ತಾಯಿ ಎರಡೂ ಆಗಿ ಬೆಳೆಸಿದವರು ಅಮ್ಮ. ಎರಡೂವರೆ ವರ್ಷದ ಪುಟ್ಟ ಕಂದಮ್ಮನಿರುವಾಗಲೇ ನೃತ್ಯದ ಮೇಲೆ ಒಲವು ಮೂಡಿತು. ತನ್ನ ಮೂರನೇ ವರ್ಷದಿಂದಲೇ ಸೌರಭಾ ಕಲಾ ಪರಿಷತ್ತಿನ ಡಾ.ಶ್ರೀವಿದ್ಯಾ ಅವರ ಬಳಿ ಭರತನಾಟ್ಯ ಅಭ್ಯಾಸಕ್ಕೆ ತೊಡಗಿಕೊಂಡರು ರೆಮೋನಾ. ಪ್ರಾರಂಭಿಕ ಅಂತ ತುಂಬಾ ಕಠಿಣವಾಗಿತ್ತು. ಸಾಕಷ್ಟು ಅವಮಾನಗಳನ್ನು ಎದುರಿಸಿದರು. ತನಗೆ ಇದು ಯಾಕೆ ಸಾಧ್ಯವಿಲ್ಲ ನೋಡಿಯೇ ಬಿಡೋಣ ಎಂದು ಛಲ ತೊಟ್ಟರು. ಇದಕ್ಕೆ ಮೂಲ ಪ್ರೇರಣೆ ತಾಯಿ. ನೃತ್ಯ ಕಲೆಯನ್ನು ಪರಿಚಯಿಸುವ ಮೂಲಕ ತಾಯಿಯು ತನ್ನ ಮಗಳು ನೃತ್ಯಗಾರ್ತಿಯಾಗುವಂತೆ, ಜೊತೆಗೆ ರೆಮೋನಾಗೆ ಭಾರತದ ಕಲೆ ಸಂಸ್ಕೃತಿ ಬಗ್ಗೆ ವಿಶೇಷ ಆಸಕ್ತಿ ಮತ್ತು ಅಭಿಮಾನವಿದ್ದುದು, ಕಲೆಯ ಪ್ರಕಾರಗಳಲ್ಲಿ ಒಂದಾದ ನೃತ್ಯದ ಕಡೆ ಗಮನಹರಿಸುವಂತೆ ಮಾಡಿತು.
ಸತತ ಅಭ್ಯಾಸ..
2019ರಲ್ಲಿ ರಂಗಪ್ರವೇಶವನ್ನು ಮಾಡಿದ ರೆಮೋನಾ ದಿನಕ್ಕೆ ಐದರಿಂದ ಆರು ಗಂಟೆಗಳ ಕಾಲ ನೃತ್ಯಾಭ್ಯಾಸವನ್ನು ಮಾಡುತ್ತಾರೆ. ಬೆಳಿಗ್ಗೆ ಆರರಿಂದ ಏಳರವರೆಗೆ ನೃತ್ಯಾಭ್ಯಾಸದ ಬಳಿಕ ಕಾಲೇಜು ತರಗತಿಗಳನ್ನು ಮುಗಿಸಿ ಮರಳಿ ಮನೆಗೆ ಬಂದ ನಂತರ ಸಂಜೆ ಆರರಿಂದ, ರಾತ್ರಿ ಒಂಭತ್ತರವರೆಗೆ ಅಭ್ಯಾಸವನ್ನು ಮುಂದುವರಿಸುತ್ತಾರೆ. ಇದೇ ಅವರ ಯಶಸ್ಸಿನ ಗುಟ್ಟಾಗಿದೆ. ಕೇವಲ ಭರತನಾಟ್ಯವಷ್ಟೇ ಅಲ್ಲದೆ ಯಕ್ಷಗಾನ, ಹುಲಿವೇಷ, ಪಾಶ್ಚಾತ್ಯ ನೃತ್ಯ ಮತ್ತು ಸಾಹಸಿ ನೃತ್ಯಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ತಾಯಿಯು ತನ್ನ ಕನಸನ್ನು ಮಗಳ ಮೂಲಕ ಸಾಕಾರಗೊಳಿಸಿಕೊಂಡಿದ್ದಾರೆ.
ಅಣ್ಣನ ಆಸರೆ: ಡಿಗ್ರಿ ವಿದ್ಯಾಭ್ಯಾಸ
ರೆಮೋನಾಳ ಕೇಶವಿನ್ಯಾಸ, ವಸ್ತ್ರವಿನ್ಯಾಸ, ಕಾರ್ಯಕ್ರಮಗಳನ್ನು ನಿಗದಿಪಡಿಸುವುದು ತಾಯಿಯಾದರೆ, ಲಂಡನ್ ನಲ್ಲಿ ಪ್ರಮುಖ ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣ ಈಕೆಯ ನ್ಯೂಟ್ರಿಷಿಯನ್ ಆಗಿದ್ದಾರೆ. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ರೆಮೋನಾ ವಿದ್ಯಾಭ್ಯಾಸದ ಜೊತೆಗೆ, ನೃತ್ಯಭ್ಯಾಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.
ದೇಶದ ಎಲ್ಲೆಡೆ ನೂರಾರು ಪ್ರದರ್ಶನ
ರೆಮೋನಾ ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದ್ದು, 2015ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್, 2017ರಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಂಡನ್, ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2021 ರಲ್ಲಿ ರಾಜ್ಯ ಸರ್ಕಾರದ ಬಾಲ ಪುರಸ್ಕಾರ ಮತ್ತು 2022 ರಲ್ಲಿ ಪ್ರಧಾನಮಂತ್ರಿ ಅತ್ಯುತ್ತಮ ಬಾಲ ಪುರಸ್ಕಾರ ಇನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇದಕ್ಕೆ ಕಳಶಪ್ರಾಯವೆಂಬಂತೆ ಇದೇ ವರ್ಷದ ಜುಲೈ 21 ರಿಂದ 28ರ ವರೆಗೆ ಸತತ ಏಳು ದಿನಗಳ ಕಾಲ 170 ಗಂಟೆ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ನೃತ್ಯವೇ ತನ್ನ ಉಸಿರಾಗಿರುವ ರೆಮೋನಾಗೆ ತನ್ನ ಎರಡನೇ ತಾಯಿಯಂತಿರುವ ನೃತ್ಯ ಗುರುಗಳಾದ ಶ್ರೀ ವಿದ್ಯಾ ಅವರಂತೆ ನಾಟ್ಯದಲ್ಲಿ ಪಿಎಚ್ಡಿ ಮಾಡಬೇಕೆಂಬ ಮಹತ್ತರ ಉದ್ದೇಶವಿದೆ. ತಾನು ಕಾರ್ಯಕ್ರಮಗಳನ್ನು ನೀಡುವ ಸಂದರ್ಭದಲ್ಲಿ ತರಗತಿಗಳಿಗೆ ಹಾಜರಾಗದೆ, ರಜೆ ಹಾಕುವ ಸನ್ನಿವೇಶಗಳು ಬಹಳಷ್ಟು ಸಲ ಎದುರಾದಾಗಲೂ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಸಹಕಾರ ನೀಡುವುದು, ಸ್ನೇಹಿತರು ಅಂದಿನ ದಿನ ನಡೆದ ತರಗತಿಯ ನೋಟ್ಸ್ ಗಳನ್ನು ಕಳುಹಿಸುವ ಮೂಲಕ ನೆರವಾಗುವುದನ್ನು ರೆಮೋನಾ ಮನಸಾರೆ ನೆನೆದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಪರಿಶ್ರಮ ಪಟ್ಟಲ್ಲಿ ಮುಂದೆ ಫಲ ಸಿಗುವುದು ಖಚಿತ ಎನ್ನುವುದಕ್ಕೆ ರೆಮೋನಾ ಯುವಜನತೆಗೆ ಮಾದರಿಯಾಗಿದ್ದಾರೆ.
ಏನಿದು ಸಾಧನೆ?
ನಿರಂತರ 7 ದಿನಗಳ ಕಾಲ ನೃತ್ಯದ ಮೂಲಕ, ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಏಳೂ ದಿನವೂ 170 ಗಂಟೆ ಭರತನಾಟ್ಯದಲ್ಲಿ ಪ್ರತೀ ಮೂರು ಗಮಟೆಗೊಮ್ಮೆ ಕೇವಲ 15 ನಿಮಿಷ ವಿಶ್ರಾಂತಿ ಪಡೆದು ನಿರಂತರವಾಗಿ ನೃತ್ಯ ಮಾಡಿದ್ದಾರೆ ರೆಮೋನಾ.








