ಗಾಯಕಿ, ಸಂಗೀತದ ಸಾಧಕಿ ಅನನ್ಯ ಭಗತ್!
ಟಿವಿಯಿಂದ ಸಿನಿಮಾ ಲೋಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ
ತೀರ್ಥಹಳ್ಳಿ ಕೃಷಿಕ ಕುಟುಂಬದ ಯುವ ಗಾಯಕಿಗೆ ನೂರಾರು ಪ್ರಶಸ್ತಿ
ಮಲೆನಾಡಿನ ಗಾನ ಕೋಗಿಲೆ ಎಂದೇ ಕರೆಯಬಹುದಾದ ಅದ್ಭುತ ಗಾನ ಪ್ರತಿಭೆ ಅನನ್ಯ ಭಗತ್. ಸಂಗೀತ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಗತಿಪರ ಕೃಷಿಕರು, ವ್ಯಾಪಾರಿಗಳು ಆದ ಸತೀಶ್ ಭಗತ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾಗಿ ಅನನ್ಯ ಭಗತ್ ತೀರ್ಥಹಳ್ಳಿಯಂತಹ ಮಲೆನಾಡಿನ ಸುಂದರ ಪರಿಸರದಲ್ಲಿ ಜನಿಸಿದರು. ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆ ಹಾಗೂ ಚಿನ್ಮಯ ಕಾಲೇಜಿನಲ್ಲಿ ಅಧ್ಯಯನ ಮಾಡಿ ಜೈನ್ ವಿಶ್ವವಿದ್ಯಾನಿಲಯದಿಂದ ಎಂ ಎ ಮ್ಯೂಸಿಕ್, ಎಂ ಫಿಲ್. ಹಾಗೂ ಪಿಎಚ್. ಡಿ. ಪದವಿಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಸಾಧನೆ
ಮೊದಲಿಗೆ ನೃತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅನನ್ಯರಿಗೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದ ಒಲವು ಉಂಟಾಗಿ ಸಂಗೀತಾಭ್ಯಾಸದಲ್ಲಿ ನಿರತರಾಗುತ್ತಾರೆ. ಬಾಲ್ಯದಿಂದಲೇ ಸಂಗೀತ ಕಲಿಯಬೇಕೆಂಬ ಆಸೆಯನ್ನು ಹೊತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಚಿಂತಾಮಣಿ ಶ್ರೀನಿವಾಸರವರಲ್ಲಿ ಅಭ್ಯಾಸ ಮಾಡುತ್ತಾರೆ. ನಂತರ ಮೈಸೂರಿಗೆ ಬಂದು ವಿದೂಷಿ ಡಾ. ಸುಕನ್ಯಾ ಪ್ರಭಾಕರ್ ಅವರಲ್ಲಿ ಸಂಗೀತ ಕಲಿತು, ಬೆಂಗಳೂರಿಗೆ ವಲಸೆ ಬಂದು ವಿದೂಷಿ ಎಂ ಎಸ್ ಶೀಲಾ ಅವರಲ್ಲಿ ಪಾಠವನ್ನು ಅಭ್ಯಾಸ ಮಾಡಿಸಿಕೊಂಡರು. ನಂತರ ಆರ್. ಡಬ್ಲ್ಯೂ ತ್ಯಾಗರಾಜ್ ಅವರಲ್ಲಿ ಸಂಗೀತ ಅಭ್ಯಾಸವನ್ನು ಮಾಡಿದರು.
ಎದೆ ತುಂಬಿ ಹಾಡುವೆನು ಖ್ಯಾತಿ
ಕನ್ನಡದ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಖ್ಯಾತವಾಗಿದ್ದ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದ ಸೂತ್ರದಾರ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಮೆಚ್ಚುಗೆ ಪಡೆದ ಅನನ್ಯ ಭಗತ್ ಈ ಕಾರ್ಯಕ್ರಮದ ಮೊದಲನೆಯ ಸುತ್ತಿನಲ್ಲಿ ತೇರ್ಗಡೆಗೊಂಡು, ಎರಡನೆಯ ಸುತ್ತಿನಲ್ಲಿ ಕೆಲವೇ ಅಂತರದಲ್ಲಿ ಪ್ರಥಮ ಬಹುಮಾನ ಪಡೆಯಲು ಸಾಧ್ಯವಾಗದೇ ಇದ್ದರೂ ತನ್ನ ಪ್ರತಿಭೆಯ ಮೂಲಕ ಹಿಂದುಸ್ತಾನಿ ಗಾಯಕಿಯಾದ ಶ್ಯಾಮಲಾ ಜಿ, ಗಾಯಕರಾದ ರಾಜು ಅನಂತಸ್ವಾಮಿ ಮತ್ತು ಸಂಗೀತ ಸಂಯೋಜಕರಾದ ಬಾಲಿ ಅವರಿಂದ ಮೆಚ್ಚುಗೆಗೆ ಪಾತ್ರರಾದರು.
ನೂರಾರು ಸ್ಪರ್ಧೆಗಳಲ್ಲಿ ಬಹುಮಾನ
ಬಾಲ್ಯದಿಂದಲೂ ಇತರರಿಗೆ ನೃತ್ಯ ಮತ್ತು ಸಂಗೀತವನ್ನು ಕಲಿಸುತ್ತಿರುವ ಅನನ್ಯ ಭಗತ್ ಬೆಂಗಳೂರಿನ ಸಾಧನ ಸಂಗೀತ ವಿದ್ಯಾಲಯದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ, ಬೆಂಗಳೂರು ಕನ್ನಡಾಭಿವೃದ್ಧಿ ಬಳಗ ಮತ್ತು ಹೊಂಬಾಳೆ ಪ್ರತಿಭಾರಂಗ ಆಯೋಜಿಸಿದ ರಾಜ್ಯಮಟ್ಟದ ದೇಶಭಕ್ತಿ ಗೀತೆ ಮತ್ತು ಜಾನಪದ ಸ್ಪರ್ಧೆ, ಬೆಂಗಳೂರಿನ ಸುಮಧುರ ವಿದ್ಯಾಲಯದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ, ಈಟಿವಿ ಕನ್ನಡ ವಾಹಿನಿಯ ಭಾವ ಸಂಗಮ ಕಾರ್ಯಕ್ರಮ, ಎದೆ ತುಂಬಿ ಹಾಡುವೆನು, ಮೈಸೂರಿನ ಸುಗಮ ಸಂಗೀತ ಅಕಾಡೆಮಿಯ ಭಾವಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುತ್ತಾ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ “ವಾಯ್ಸ್ ಆಫ್ ಕರ್ನಾಟಕ” ಎಂಬ ರಿಯಾಲಿಟಿ ಶೋನಲ್ಲಿ ಗೆದ್ದ ನಂತರ ಇವರ ಸಂಗೀತ ಪಯಣ ಬೇರೆಯದೇ ತಿರುವನ್ನು ಪಡೆದುಕೊಂಡಿತು ಹತ್ತಾರು ಹಿಟ್ ಸಿನಿಮಾಗಳಿಗೆ ಸಂಗೀತ ಅನನ್ಯ ಅವರ ಅನನ್ಯ ಕಂಠ ಅವರನ್ನು ಚಿತ್ರರಂಗಕ್ಕೆ ಸಹ ಕರೆದುಕೊಂಡು ಹೋಗಿದೆ. ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’, ‘ಮೀರಾ ಮೀಟ್ಸ್ ಮುರಳಿ’, ‘ಮಾತುಕಥೆ’, ‘ಎರಡು ಕನಸು’, ‘ಹೊಂಬಣ್ಣ’, ‘ಕಾಫಿ ತೋಟ’, ‘ನಾನಿ’, ‘ನೀರ್ ದೋಸೆ’, ‘ಮನಸಿನ ಮರೆಯಲಿ’, ‘ಕವಿ‘ ಮುಂತಾದ ಚಲನಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಹಾಡಿದ್ದಾರೆ.
ತನ್ನದೇ ಆಲ್ಬಮ್ ಸಾಂಗ್ ಈ ಕನಸಿನ ಆರಂಭಕ್ಕೆ!
ವಿಭಿನ್ನ ಆಲ್ಬಮ್ ಹಾಗೂ ಪ್ರಾಜೆಕ್ಟ್ಗಳಿಗೆ ಹಾಡುತ್ತಿರುವಾಗ, ತಮ್ಮದೇ ಸಂಯೋಜನೆಯಲ್ಲಿ ಹಾಡು ಮೂಡಿ ಬಂದರೆ ಹೇಗಿರುತ್ತದೆ ಎಂಬ ಆಲೋಚನೆಯಿಂದ “ಈ ಕನಸಿನ ಆರಂಭಕ್ಕೆ” ಎಂಬ ತಮ್ಮ ಮೊದಲ ನಿರ್ಮಾಣದ ವಿಡಿಯೋ ಸಾಂಗ್ ಅನ್ನು ಶಿವಮೊಗ್ಗದ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯದಿಂದ ಹೆಸರಾಗಿರುವ ಚಿಬ್ಬಲಗುಡ್ಡೆ, ಕುಂದಾದ್ರಿ, ಕುಪ್ಪಳ್ಳಿ, ಗಳಲ್ಲಿ ಚಿತ್ರೀಕರಿಸಿದ್ದಾರೆ. “ವಿಶೇಷವಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ಕನಸು ಇರುತ್ತದೆ. ಕನಸನ್ನು ಸಾಕಾರಗೊಳಿಸಲಾಗದಿದ್ದರೂ, ಮನಸ್ಸಿನ ದುಃಖ ದುಮ್ಮಾನದಿಂದ ಹೊರಬಂದು ಬಣ್ಣದ ಜಗತ್ತಿನ ಸೌಂದರ್ಯವನ್ನು ಮಹಿಳೆಯರಿಗೆ ತೋರಿಸಬೇಕು ಎಂಬ ಉದ್ದೇಶದಿಂದ ಈ ವಿಡಿಯೋ ಹಾಡನ್ನು ಹೋಳಿ ಹಬ್ಬದ ದಿನದಂದು ಅನನ್ಯ ಭಗತ್ ತಮ್ಮ ತಂಡದೊಂದಿಗೆ ಬಿಡುಗಡೆ ಮಾಡಿದ್ದಾರೆ.”
ಬಯಸಿದೆ ಜೊತೆಯನು, ಒಂದು ಕನಸು, ದೂರ ದಾರಿ, ಗುಬ್ಬಿ ಗುಬ್ಬಚ್ಚಿ, ರತ್ತೊ ರತ್ತೊ, ರಾಯನ ಮಗನೇ, ಕೃಷ್ಣ ನೀ ಬೇಗನೆ ಬಾರೋ, ಮನಸಿನ ಮರೆಯಲ್ಲಿ ಹೀಗೆ ಹಲವಾರು ಹಿಟ್ ಗೀತೆಗಳನ್ನು ಹಾಡಿದ್ದಾರೆ. ಘಟಾನುಘಟಿ ಕಲಾವಿದರ ಜತೆ ವೇದಿಕೆ ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ಗಾಯಕ ಕುನಾಲ್ ಗಾಂಜಾವಾಲಾ, ಸಂಗೀತ ನಿರ್ದೇಶಕ ಮನೋಮೂರ್ತಿ, ಮಣಿಕಾಂತ್ ಕದ್ರಿ, ಸಾಧು ಕೋಕಿಲಾ ಮುಂತಾದವರ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಹಲವಾರು ಮ್ಯೂಸಿಕ್ ಆಲ್ಬಮ್ ಮತ್ತು ನೃತ್ಯ ರೂಪಕಗಳಿಗೆ ಧನಿಯಾಗಿದ್ದಾರೆ.
ಆಕಾಶವಾಣಿಯ ಬಿ-ಹೈ ಗ್ರೇಡ್ ಕಲಾವಿದೆಯೂ ಇವರಾಗಿದ್ದು ,ಕರ್ನಾಟಕ ಕಲೆ ಮತ್ತು ಸಾಧನೆ ಅಕಾಡೆಮಿಯವರು 2014-15 ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಅನನ್ಯರಿಗೆ ನೀಡಿದ್ದಾರೆ. ‘ನೀರ್ ದೋಸೆ’ ಚಿತ್ರದ ಗಾಯನಕ್ಕೆ ಕರ್ನಾಟಕ ಚಿತ್ರ ರಸಿಕರ ಸಂಘದವರ 2016-17 ಸಾಲಿನ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಯು ದೊರಕಿದೆ. 2018 ನೇ ಸಾಲಿನ ರೇಡಿಯೋ ಸಿಟಿ ಸಿನಿ ಅವಾರ್ಡ್ಸ್ ಅತ್ಯುತ್ತಮ ಹಿನ್ನಲೆ ಗಾಯಕಿ (ನೀರ್ ದೋಸೆ) ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡದ ಜೊತೆಗೆ ಹಿಂದಿ ಮತ್ತು ತೆಲುಗು ಸೇರಿದಂತೆ ಕಾವ್ಯದ ರಾಗಗಳಲ್ಲಿ ಇರುವ ಹಾಡುಗಳನ್ನು ಬಳಸಿಕೊಂಡು ಮ್ಯಾಶಪ್ ಮಾಡಿ ಕನ್ನಡ ಭಾಷೆಯ ಹಾಡನ್ನು ಪರಭಾಷಿಕರಿಗೆ ತಲುಪಿಸುವ ಪ್ರಯೋಗವನ್ನು ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದಾರೆ.








