ಸೋಷಿಯಲ್ ಮೀಡಿಯಾ ಎಂಬ ಭೂತ!
– ಯುವ ಜನರು, ಮಕ್ಕಳ ಜೀವನ, ಜಾಣ್ಮೆ, ಕೌಶಲ್ಯ ಮಾಯ
– ಬಾಂಧವ್ಯದ ಬೆಲೆ ಗೊತ್ತಿಲ್ಲ!.. ಜೀವನ ಮಾಡಲು ಬರಲ್ಲ…
ಸರ್ಕಾರ ನಿಷೇಧ ಮಾಡಿದ್ರೂ ಪೋಷಕರ ನಿರ್ಧಾರವೇ ಮುಖ್ಯ
ಸಾಮಾಜಿಕ ಜಾಲತಾಣಗಳ ಬಳಕೆಗೆ ಅಪ್ರಾಪ್ತರಿಗೆ ನಿರ್ಬಂಧವನ್ನು ವಿಧಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ಉದ್ದೇಶ ಸ್ವಾಗತಾರ್ಹ. ಈಗಾಗಲೇ ಆಸ್ಟ್ರೇಲಿಯಾ ದೇಶದಲ್ಲಿ ಈ ನಿಯಮ ಜಾರಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ವಯಸ್ಸಿನ ನಿರ್ಬಂಧವನ್ನು ವಿಧಿಸಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗುತ್ತಿದೆ. ಆದರೆ ಈ ನಿಯಮ ಜಾರಿಗೆ ಪೋಷಕರ ಸಹಕಾರ ಕೂಡ ಬೇಕು. ಸಾಮಾಜಿಕ ಜಾಲತಾಣಗಳ ಹುಳುವಾಗಿರುವ ಇಂದಿನ ಯುವ ಸಮುದಾಯ ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ದುರ್ಬಲರಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳ ನೇರ ಕಾರಣ. ಬಿದ್ದಲ್ಲೇ ಬಿದ್ದು ತುಕ್ಕು ಹಿಡಿಯುವ ಕಬ್ಬಿಣದಂತೆ ಕೂತಲ್ಲೇ ಕೂತು ಜಿಡ್ಡು ಹಿಡಿದ ಯಂತ್ರದಂತಾಗುತ್ತಿವೆ ಇಂದಿನ ಯುವಪೀಳಿಗೆ.
ಬಾಂಧವ್ಯದ ಬೆಲೆ ಗೊತ್ತಿಲ್ಲ!
ಒಂದೇ ಮನೆಯಲ್ಲಿದ್ದರು ಅಪರಿಚಿತರಂತೆ ಬದುಕುತ್ತಿದ್ದೇವೆ ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳೊಳಗೆ ಇಂದಿನ ಮಕ್ಕಳು ಸಿಲುಕಿರುವುದು, ಕೌಟುಂಬಿಕ ಬಾಂಧವ್ಯದ ಅರಿವು ಆಗದಂತೆ ನಮ್ಮನ್ನಾವರಿಸಿರುವ ಈ ಸಾಮಾಜಿಕ ಜಾಲತಾಣವೆಂಬ ಮಾಯ ಜಾಲ ನಮ್ಮ ದೇಶದ ಮಾನವ ಸಂಪನ್ಮೂಲದ ಅಪಬಳಕೆಗೂ ಕಾರಣವಾಗುತ್ತಿದೆ, ಓದುವ ಸಮಯದಲ್ಲಿ ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಸಿಕ್ಕಿದ್ದರೆ ಯುವಜನತೆ ಕೆಲಸದ ಸಮಯದಲ್ಲಿಯೂ ಫೋನುಗಳಲ್ಲಿಯೇ ಮುಳುಗಿ ಹೋಗಿದ್ದಾರೆ. ವಿದ್ಯಾರ್ಥಿಗಳಿಗೆ ಪೋಷಕರು ಶಿಕ್ಷಣಕ್ಕೆ ಪೂರಕವಾಗಿರಲಿ ಎಂಬ ಕಾರಣಕ್ಕೆ ಫೋನ್ ನೀಡಿದರೆ ಅದೇ ಮಕ್ಕಳು ಇಂದು ಶಾಲಾ-ಕಾಲೇಜುಗಳಿಗೆ ಚಕ್ಕರ್ ಹಾಕಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ, ಹುಚ್ಚು ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಚಟ್ಟಕ್ಕೇರುತ್ತಿರುವ ಪ್ರಕರಣಗಳೇ ಹೆಚ್ಚುತ್ತಿವೆ.
ದೇಶದ ಮಾನವ ಸಂಪನ್ಮೂಲ ವ್ಯರ್ಥ!
ಮಕ್ಕಳ ಸಾಮಾಜಿಕ ಜಾಲತಾಣದ ಅವಲಂಬನೆಗೆ ಸಾಕ್ಷಿಯಾಗಿ ಇಂದು ಯಾವ ಶಿಕ್ಷಣ ಸಂಸ್ಥೆಗಳು ಎಷ್ಟೇ ಕಟ್ಟು ನಿಟ್ಟಾದ ನಿಯಮ ಜಾರಿಗೊಳಿಸಿದರೂ ಶಾಲಾ-ಕಾಲೇಜುಗಳಲ್ಲಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲದ ಅಪ ಬಳಕೆಗೆ ಕಾರಣವಾಗುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆಗೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಬೇಕಾದ ಯುವ ಸಮುದಾಯದ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ವಿಚಾರಗಳಿಗೆ ಕೊಳ್ಳಿ ಇಡುತ್ತಿರುವುದು ಇದೇ ಸಾಮಾಜಿಕ ಜಾಲತಾಣಗಳು. ಇವುಗಳ ಬಳಕೆಯ ಮೇಲೆ ವಯಸ್ಸಿನ ನಿರ್ಬಂಧ ವಿಧಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಸಾಮಾಜಿಕ ಜಾಲತಾಣಗಳ ಅಡಿಕ್ಷನ್ ಕೂಸು ಹೆಜ್ಜೆ ಇಡುವುದಕ್ಕೂ ಮುಂಚೆ ಶುರುವಾದದ್ದು ಇಂದು ಬೆಳೆದು ದೊಡ್ಡವರಾದರೂ ಅಡಿಕ್ಷನ್ ಸಹ ಪೆಡಂಭೂತದಂತೆಯೇ ಬೆಳೆದು ನಿಂತಿದೆ ಇದಕ್ಕೆ ಪೋಷಕರು ಒಂದರ್ಥದಲ್ಲಿ ಕಾರಣವಾಗಿದ್ದಾರೆ.
ಇಂದಿಗೂ ಊಟ, ತಿಂಡಿ, ನಿದ್ದೆ, ಓದು, ಕೆಲಸ ಎಲ್ಲ ಬದಿಗೊತ್ತಿ ಫೇಸ್ಬುಕ್, ವಾಟ್ಸಪ್ ಇನ್ಸ್ಟಾಗ್ರಾಮ್, ಟ್ವಿಟ್ಟರ್, ಯೂಟ್ಯೂಬ್ಗಳಲ್ಲಿಯೇ ಮುಳುಗಿದ್ದಾರೆ.. ವಿಪರ್ಯಾಸವೆಂದರೆ ಮಕ್ಕಳ ಈ ಗೀಳನ್ನು ಬಿಡಿಸಲು ಪೋಷಕರು ಇಂದಿಗೂ ಒದ್ದಾಡುತ್ತಿದ್ದಾರೆ, ಶಿಕ್ಷಕರ ಪಾಲಿಗಂತು ದೊಡ್ಡ ತಲೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಅಶ್ಲೀಲ ದೃಶ್ಯಾವಳಿಗಳನ್ನು ಕಾಣುವುದು, ಆನ್ಲೈನ್ ಗೇಮಿಂಗ್ಗಳು, ಬೆಟ್ಟಿಂಗ್, ಮಾದಕ ವ್ಯಸನಗಳನ್ನು ಅಂಟಿಸಿಕೊಳ್ಳುವುದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮೊದಲಾದ ಸಮಾಜಕ್ಕೂ ಮತ್ತು ಮಗುವಿನ ಭವಿಷ್ಯಕ್ಕೂ ತೊಡಕಾದ ಅನೇಕ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಈ ಸಾಮಾಜಿಕ ಜಾಲತಾಣಗಳೆ ಬುನಾದಿಯನ್ನು ಹಾಕುತ್ತಿದ್ದು ಇದರ ಬಳಕೆಯ ವಿರುದ್ಧ ವಯಸ್ಸಿನ ನಿರ್ಬಂಧವನ್ನು ವಿಧಿಸಿರುವುದು ಸ್ವಾಗತಾರ್ಹ. ಆದರೆ ಎಷ್ಟರಮಟ್ಟಿಗೆ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ ಎನ್ನುವುದರ ಮೇಲೆ ಇದರ ಸಾರ್ಥಕತೆ ನಿಂತಿದೆ ಅಷ್ಟೆ.
ಲೇಖನ: ಪೂಜಾ ತೀರ್ಥಹಳ್ಳಿ
ಉಪನ್ಯಾಸಕರು
ಪಿ ಇ ಎಸ್ ಪಿ ಯು ಕಾಲೇಜು
ಬೆಂಗಳೂರು








