ಕರಾವಳಿ ಟಾಪ್ ನ್ಯೂಸ್
* ಬಂಟ್ವಾಳ: ಈಜಲು ಹೋದ ನಾಲ್ವರು ಮಕ್ಕಳು ನೀರು ಪಾಲು; ಓರ್ವನ ಸಾವು
* ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸೈಬರ್ ಅಪರಾಧ
* ಕಾಪು: ಪಡುಬಿದ್ರಿ ವ್ಯಕ್ತಿ ನಾಪತ್ತೆ
* ಪುತ್ತೂರು: ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪಿಗಳಿಗೆ ಜಾಮೀನು
* ಸುಳ್ಯ: ಚೆಕ್ ಅಮಾನ್ಯ; ಆರೋಪಿ ಬಂಧನ
* ಬೆಳ್ತಂಗಡಿ: ತಿಮರೋಡಿಗೆ ಎರಡನೇ ನೋಟಿಸ್ ಜಾರಿ
* ಉಡುಪಿ: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ
* ಬ್ರಹ್ಮಾವರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆಗಳು ಪತ್ತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಬಂಟ್ವಾಳ: ಈಜಲು ಹೋದ ನಾಲ್ವರು ಮಕ್ಕಳು ನೀರು ಪಾಲು; ಓರ್ವನ ಸಾವು
ಬಂಟ್ವಾಳ: ಕಳೆದ ಹತ್ತು ವರ್ಷಗಳ ಹಿಂದೆ ಕಪ್ಪು ಕಲ್ಲು ತೆಗೆಯಲೆಂದು ರಚಿಸಿದ ಹೊಂಡದಲ್ಲಿ, ನಾಲ್ವರು ಬಾಲಕರು ಈಜಾಡಲು ತೆರಳಿ ನೀರಿನ ಪಾಲಾಗಿರುವ ಘಟನೆ, ಭಾನುವಾರದಂದು ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನಡೆದಿದೆ. ಇದರಲ್ಲಿ ಪುತ್ತೂರಿನ ಕಬಕ ಗ್ರಾಮದ ನಿವಾಸಿ ಅಜ್ಮಾನ್ ಬಿನ್ ಹಸೈನಾರ್ ಎನ್ನುವ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಸಂದರ್ಭದಲ್ಲಿ ವಿಟ್ಲದ ಕಂದಾಯ ನಿರೀಕ್ಷಕರಾದ ರವಿ ಎಂ ಎನ್ ಮತ್ತು ಗ್ರಾಮಾಡಳಿತ ಅಧಿಕಾರಿಗಳಾದ ಅನಿಲ್ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಬಾಲಕನ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸೈಬರ್ ಅಪರಾಧ.
ಮಂಗಳೂರು: ಹೆಚ್ಚಿನ ಹಣದ ಆಮಿಷಕ್ಕೆ ಒಳಗಾಗಿ, ತಮ್ಮ ಇದ್ದ ಹಣವನ್ನೂ ಕಳೆದುಕೊಳ್ಳುವ ಮೂಲಕ, ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಷ್ಟೇ ಜಾಗೃತಿ ವಹಿಸಿದರು ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಜನವರಿಯಿಂದ ಜುಲೈವರೆಗೆ ಮಂಗಳೂರು ವ್ಯಾಪ್ತಿಯಲ್ಲಿ 15.51 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ 78.64 ಲಕ್ಷದಷ್ಟು ಹಣವು ಅಪರಿಚಿತರ ಪಾಲಾಗಿದೆ ಎಂಬ ವರದಿ ಹೊರಬಂದಿದೆ. ಈ ಮೂಲಕ ಮಂಗಳೂರಿನಲ್ಲಿ 77 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 60 ಸೈಬರ್ ಪ್ರಕರಣಗಳು ದಾಖಲಾಗಿವೆ. ಇಡೀ ರಾಜ್ಯದ್ಯಂತ ಸುಮಾರು 8,620 ಸೈಬರ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಇದರಲ್ಲಿ 861 ಕೋಟಿಯಷ್ಟು ಹಣ ವಂಚನೆಗೆ ಒಳಗಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇಡೀ ಕರ್ನಾಟಕದಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಸೈಬರ್ ಅಪರಾಧಗಳು ನಡೆದಿವೆ ಎನ್ನುವ ಮಾಹಿತಿ ಲಭಿಸಿದೆ. ಮುಖ್ಯವಾಗಿ ಆನ್ ಲೈನ್ ಹೂಡಿಕೆ, ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಅಪರಿಚಿತರು ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲೂ ವಾಟ್ಸಾಪ್ ಮತ್ತು ಟೆಲಿಗ್ರಾಂ ಲಿಂಕ್ ಅನ್ನು ಕಳುಹಿಸುವ ಮೂಲಕ ಹಣವನ್ನು ದೋಚುವ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕೆ ಅವರು “ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೂ, ಜನರು ಅಧಿಕ ಹಣವನ್ನು ಗಳಿಸುವ ದುರಾಸೆಯಿಂದ ತಮ್ಮಲ್ಲಿರುವ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸೈಬರ್ ವಂಚನೆಯ ಸ್ವರೂಪಗಳು ಕೂಡ ಬದಲಾಗಿವೆ. ಮೊದಲು ವಂಚಕರು ಸಾರ್ವಜನಿಕರ ಖಾತೆಗೆ ಕನ್ನ ಹಾಕುತ್ತಿದ್ದರು, ಇದೀಗ ಜನರೇ ಅಪರಿಚಿತರ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಿರುವುದು ಕಂಡುಬಂದಿದೆ. ಇನ್ನಾದರೂ ಜನರು ತಮ್ಮ ದುರಾಸೆಯನ್ನು ಬಿಟ್ಟು ಜಾಗೃತರಾಗಿರಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು” ಎಂದು ತಿಳಿಸಿದ್ದಾರೆ.
* ಕಾಪು: ಪಡುಬಿದ್ರಿ ವ್ಯಕ್ತಿ ನಾಪತ್ತೆ
ಕಾಪು: ಬಡಾ ಗ್ರಾಮದ ನಿವಾಸಿಯಾದ ಉಮರಬ್ಬ ಎಂಬ ವ್ಯಕ್ತಿಯು ನಾಪತ್ತೆಯಾಗಿರುವ ಸಂಗತಿ ಭಾನುವಾರ ನಡೆದಿದೆ. ರಿಪ್ಪನ್ ಪೇಟೆಯಲ್ಲಿ ನಡೆಯುತ್ತಿದ್ದ ಈದ್ ಮಿಲಾದ್ ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ತಿಳಿಸಿ, ಉಚ್ಚಿಲ ಬಸ್ ನಿಲ್ದಾಣಕ್ಕೆ ತೆರಳಿದ್ದು, ಬಳಿಕ ರಿಪ್ಪನ್ ಪೇಟೆಗೂ ಹೋಗದೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಮರಬ್ಬ ಅವರ ಕುರಿತು ಮಾಹಿತಿ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
* ಪುತ್ತೂರು: ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪಿಗಳಿಗೆ ಜಾಮೀನು.
ಪುತ್ತೂರು: ಮಾಡ್ನೂರು ಗ್ರಾಮದ ಸಾರಕರೆ ಸೇತುವೆಯ ಬಳಿ, ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ ಆರರಂದು ಅನುಮಾನ ಬಂದ ಕಾರಣ, ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ, ದಾಖಲೆಗಳು ನಕಲಿಯಾಗಿದ್ದರ ಕುರಿತು ಲಾರಿ ಮತ್ತು ಅದರಲ್ಲಿನ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ಗ್ರಾಮದ ಪರಮೇಶಪ್ಪ ಲಮಾಣಿ ಮತ್ತು ಸುಳ್ಯದ ಜಾಲ್ಸೂರು ಗ್ರಾಮದ ಪ್ರಕಾಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪರ ವಕೀಲರಾದ ಅರಿಯಡ್ಕ ಉದಯಶಂಕರ ಶೆಟ್ಟಿ, ಕೃಷ್ಣವೇಣಿ, ರಾಕೇಶ್ ಮಸ್ಕರೆನ್ಹಸ್ ಮತ್ತು ಅವರು ವಾದ ಮಂಡಿಸಿದುದರ ಹಿನ್ನೆಲೆಯಲ್ಲಿ ಪುತ್ತೂರಿನ ಐದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗಳಿಗೆ ನಿರೀಕ್ಷಣ ಜಾಮೀನನ್ನು ಮಂಜೂರು ಮಾಡಿದೆ.
* ಸುಳ್ಯ: ಚೆಕ್ ಅಮಾನ್ಯ; ಆರೋಪಿ ಬಂಧನ
ಸುಳ್ಯ: ತಿರುಮಲೆ ನಿವಾಸಿ ಪುರುಷೋತ್ತಮ ಎನ್ನುವವರು ಸುಳ್ಯದ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಸಾಲವನ್ನು ಪಡೆದುಕೊಂಡಿದ್ದು, ಅದನ್ನು ಮರುಪಾವತಿಸಲು ನೀಡಿದ ಚೆಕ್ ಅಮಾನ್ಯಗೊಂಡಿದ್ದು, ಸೊಸೈಟಿಯವರು ದೂರು ನೀಡಿದ ಹಿನ್ನೆಲೆಯಲ್ಲಿ, ಸುಳ್ಯದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪುರುಷೋತ್ತಮ ಒಮ್ಮೆ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಳಿಕ ಸಮನ್ಸ್ ಮತ್ತು ವಾರೆಂಟ್ ಅನ್ನು ನ್ಯಾಯಾಲಯವು ನೀಡಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪುರುಷೋತ್ತಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
* ಬೆಳ್ತಂಗಡಿ: ತಿಮರೋಡಿಗೆ ಎರಡನೇ ನೋಟಿಸ್ ಜಾರಿ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿಗೆ, ಇದೀಗ ನ್ಯಾಯಾಲಯ ಮತ್ತೊಂದು ನೋಟಿಸ್ ಅನ್ನು ಜಾರಿಗೊಳಿಸಿದೆ. ಸೆಪ್ಟೆಂಬರ್ ಹದಿನಾರರಂದು ತಿಮರೋಡಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರದಂದು ಮಹೇಶ್ ಶೆಟ್ಟಿ ಮನೆಗೆ ತೆರಳಿದ ಸಂದರ್ಭದಲ್ಲಿ, ಆತ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಹೀಗಾಗಿ ಪೊಲೀಸರು ಸೆಪ್ಟೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದರು. ಈ ಕಾರಣಕ್ಕಾಗಿ ತಿಮರೋಡಿ ಸೆಪ್ಟೆಂಬರ್ 21ರಂದು ವಿಚಾರಣೆಗೆ ಹಾಜರಾಗಲು ಅಸಾಧ್ಯ ಎಂದು, ಆಪ್ತರ ಮೂಲಕ ತನಿಖಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಸೆಪ್ಟೆಂಬರ್ 25ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ಅನ್ನು ಮನೆಯ ಗೋಡೆಗೆ ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಕಳೆದ ತಿಂಗಳ 26ರಂದು ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಆತನ ಮನೆಯಲ್ಲಿ ಪರವಾನಿಗೆರಹಿತ ಎರಡು ತಲವಾರು ಹಾಗೂ ಒಂದು ಬಂದೂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರಣೆಯ ಬಳಿಕ ಪ್ರಕರಣವು ಮತ್ತೊಂದು ತಿರುವು ಪಡೆದುಕೊಳ್ಳಬಹುದೇ ಎಂಬ ಅನುವಾದಗಳು ವ್ಯಕ್ತವಾಗಿದೆ.
* ಉಡುಪಿ: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ
ಉಡುಪಿ: ಗೋಪಾಲಾಚಾರ್ ಎನ್ನುವ ವ್ಯಕ್ತಿಯ ಖಾತೆಯಿಂದ ಸೆಪ್ಟೆಂಬರ್ ಹದಿನಾರರಂದು ಹಣವನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ. “ನನಗೆ ತಿಳಿಯದಂತೆ ನನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ 18.000 ರೂಪಾಯಿ ಹಾಗೂ ಕರ್ನಾಟಕ ಬ್ಯಾಂಕ್ ಖಾತೆಯಿಂದ 40,000 ರೂಪಾಯಿ ಆನ್ ಲೈನ್ ಮುಖಾಂತರ ವರ್ಗಾಯಿಸಿಕೊಂಡಿದ್ದಾರೆ” ಎಂದು ಗೋಪಾಲಾಚಾರ್ ಅವರು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.
* ಬ್ರಹ್ಮಾವರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೊಬ್ಬರ ತಲೆಬುರುಡೆ ಮತ್ತು ಮೂಳೆಗಳು ನಡೂರು ಗ್ರಾಮದ ನೆಕ್ಕರ್ಕ ಬಳಿಯ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ. ಮರದ ಕೊಂಬೆಗೆ ಟವೆಲನ್ನು ಕಟ್ಟಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







