ಮಿಲ್ಲೆಕ್ಸ್ ಸಂಸ್ಥಾಪಕ ಅನಿಲ್ ಜೋಯ್ಸ್
ಬೆಂಗಳೂರಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಬಿಟ್ಟು ಹಳ್ಳಿಯಲ್ಲೇ ರಾಷ್ಟ್ರೀಯ ಮಟ್ಟದ ಬ್ರಾಂಡ್ ಕಟ್ಟಿದ ಸಾಧಕ
ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹುದ್ದೆ ತ್ಯಜಿಸಿ ಹುಟ್ಟಿದ ಊರಲ್ಲೇ ಏನಾದರೂ ಮಾಡಬೇಕು ಎಂದು ಊರು ಬಸ್ಸು ಹತ್ತಿದ ಯುವಕ ಇಂದು 25 ಕೋಟಿ ವ್ಯವಹಾರದ ಒಡೆಯ. ಜತೆಗೆ ಹಳ್ಳಿಯಲ್ಲೇ ನೂರಾರು ಜನರಿಗೆ ಉದ್ಯೋಗ ಕೊಟ್ಟ ಉದ್ಯೋಗದಾತ. ಸಿರಿಧಾನ್ಯ, ಉತ್ತಮ ಪೋಷಕಾಂಶವುಳ್ಳ ಆಹಾರ ತಯಾರು ಮಾಡುವ ಕಂಪನಿ ಸಂಸ್ಥಾಪಕ. ಹೌದು. ಅನಿಲ್ ಜೋಯಿಸ್ ಈ ಸಾಧಕ ಉದ್ಯಮಿ. ಮಿಲ್ಲೆಕ್ಸ್ ಎಂಬ ಬ್ರಾಂಡ್ ಕಟ್ಟಿದ ಸಾಧಕ. ಅನಿಲ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯಲ್ಲಿ ಜನಿಸಿದರು. ಇವರದು ಕೃಷಿ ಮತ್ತು ಉದ್ಯಮದ ಕುಟುಂಬವಾಗಿತ್ತು.
ಇಂಜಿನಿಯರ್ ಪದವೀಧರರಾದ ಅನಿಲ್ ಅವರು, ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ 13 ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ಲಕ್ಷ ಲಕ್ಷ ವೇತನದ ಹುದ್ದೆಯನ್ನು ತ್ಯಜಿಸಿ, ನಮ್ಮತನವನ್ನು ಉಳಿಸಿಕೊಳ್ಳುವ ಮೂಲಕ, ಸ್ವಾವಲಂಬಿ ಜೀವನ ನಡೆಸಬೇಕು, ನಮ್ಮವರಿಗಾಗಿ ದುಡಿಯಬೇಕು ಎಂಬ ಉದ್ದೇಶದಿಂದ ಹುಟ್ಟೂರಿಗೆ ಹಿಂತಿರುಗಿ, ತಂದೆಯ ಹಿಟ್ಟಿನ ಗಿರಣಿಯನ್ನು ಪ್ರೇರಣೆಯಾಗಿಸಿಕೊಂಡು ಸಣ್ಣ ಪ್ರಮಾಣದ ಆಹಾರ ಸಂಬ0ಧಿ ಉದ್ಯಮವನ್ನು ಎರಡು ಲಕ್ಷ ರೂಪಾಯಿ ಬಂಡವಾಳದೊ0ದಿಗೆ ಮಿಲೆಕ್ಸ್ ಎಂಬ ಹೆಸರಿನಲ್ಲಿ 2019ರಲ್ಲಿ ಆರಂಭಿಸಿದರು.
ಉತ್ತಮ ಗುಣಮಟ್ಟದ, ಆರೋಗ್ಯಕರ, ದೇಸಿ ಆಹಾರವನ್ನು ಜಗತ್ತಿಗೆ ವಿತರಿಸುವ ಗುರಿಯನ್ನು ಹೊಂದಿರುವ ಈ ಉದ್ಯಮ ಇಂದು ಇಪ್ಪತ್ತೈದು ಕೋಟಿ ವಹಿವಾಟು ಹೊಂದಿದೆ.ಈ ಉದ್ಯಮದಿಂದ ಮಲೆನಾಡಿನ ಹಲವಾರು ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ದಾರಿಯಾಗಿದೆ.
ಪತಿಯ ಉದ್ಯಮಕ್ಕೆ ಪತ್ನಿ ಸಾಥ್!
ಪತ್ನಿ ಮಧುರಾ ಅನಿಲ್ ಅವರು ಗಣಿತಶಾಸ್ತ್ರ ಸ್ನಾತಕೋತ್ತರ ವಿಷಯದಲ್ಲಿ, ಉತ್ತಮ ಅಂಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದು, ಶಿಕ್ಷಕ ವೃತ್ತಿ ತ್ಯಜಿಸಿ ಪತಿಯೊಂದಿಗೆ ಕೈಜೋಡಿಸಿದ್ದಾರೆ. ಇವರು ತಮ್ಮ ಉದ್ಯಮದ ನಿರ್ದೇಶಕರಾಗಿ ರೂಪುಗೊಂಡಿದ್ದಾರೆ. ಪ್ರಸ್ತುತ ಅನಿಲ್ ಅವರು ಕಮ್ಮರಡಿಯಲ್ಲಿನ ತಮ್ಮ ಸಮಾನಮ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲಿಕರಾಗಿದ್ದು, ಆಹಾರ ಪೂರೈಕೆಯಲ್ಲಿ ಪತ್ನಿಯೊಂದಿಗೆ ಕರ್ತವ್ಯ ನಿರತರಾಗಿದ್ದಾರೆ.
ಉದ್ಯಮ ಕ್ಷೇತ್ರದಲ್ಲಿನ ಅನಿಲ್ ಅವರ ಸಾಧನೆಯನ್ನು ಗುರುತಿಸಿ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಬ್ಯೂಸಿನೆಸ್ ಅಚೀವರ್ಸ್ ಪ್ರಶಸ್ತಿ- 2024 ನೀಡಿ ಗೌರವಿಸಲಾಗಿದೆ. ಇನ್ನು ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.








