ಸಂಗೀತ ಕವಿ ಕವಿರಾಜ್
ಹೊಸನಗರ-ತೀರ್ಥಹಳ್ಳಿ ಗಡಿಯ ಯಡೂರಿನ ಕವಿರಾಜ್ ಎವರ್ ಗ್ರೀನ್ ಸಂಗೀತ ರಚನೆಕಾರ
ಕಂಕಣ ಟೀಂ ಕಟ್ಟಿ ಸಮಾಜ ಸೇವೆಯಲ್ಲೂ ಮುಂಚೂಣಿ
ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ಚಿತ್ರಗೀತ ರಚನೆಕಾರರಾದ ಕವಿರಾಜ್ ಮಲೆನಾಡಿನ ಹೆಮ್ಮೆಯ ಪ್ರತಿಭೆ. ಹೊಸನಗರ ತಾಲ್ಲೂಕಿಗೆ ಸೇರಿದ ತೀರ್ಥಹಳ್ಳಿ ತಾಲ್ಲೂಕಿಗೆ ಹೊಂದಿಕೊಂಡಿರುವ ಯಡೂರು ಎಂಬ ಗ್ರಾಮದಲ್ಲಿ ಜನಿಸಿದರು. ಕವಿರಾಜ್ ಎಂಬುದು ತಂದೆ ತಾಯಿ ಇಟ್ಟ ಹೆಸರೇ ಆಗಿದೆ. ತಂದೆ ಹರಿಯಪ್ಪ ನಾಯಕ ನೇರ ನಡೆ ನುಡಿಯ ವ್ಯಕ್ತಿತ್ವದವರಾಗಿದ್ದು ಕವಿರಾಜ್ ಅವರಿಗೂ ಈ ಗುಣಗಳು ಅಡಕವಾಗಿದೆ ಎಂದು ಸ್ವತಃ ಕವಿರಾಜ್ ಅವರೇ ಹೇಳಿಕೊಂಡಿದ್ದಾರೆ.
ತನಗೆ ತಂದೆ ತಾಯಿಗಳು ಇಟ್ಟ ಹೆಸರು, ಬಾಲ್ಯದಲ್ಲಿ ಇದ್ದ ದಿನಪತ್ರಿಕೆಗಳನ್ನು ಓದುವ ಹವ್ಯಾಸ, ತಾಯಿ ತರಂಗ, ಸುಧಾ ಮೊದಲಾದ ನಿಯತಕಾಲಿಕೆಗಳಲ್ಲಿ ಓದುತ್ತಿದ್ದ ಕಥೆ, ಕಾದಂಬರಿಗಳು, ಹುಟ್ಟೂರಿನ ವಾತಾವರಣ ನನ್ನನ್ನು ಕವಿಯಾಗಿಸಿತು ಎನ್ನುವುದು ಕವಿರಾಜ್ ಅವರ ಅಂತರಂಗದ ಮಾತು. ತರಂಗಕ್ಕೆ ಕವನ ಬರೆದು ಕಳುಹಿಸುತ್ತಿದ್ದರು ಮತ್ತು ಪ್ರಾಥಮಿಕ ಶಾಲೆಯಲ್ಲೇ ವಾಚಕರ ವಾಣಿ ವಿಭಾಗಕ್ಕೆ ಬರೆದು ಕಳುಹಿಸುತ್ತಿದ್ದರು. ತೀರ್ಥಹಳ್ಳಿ, ಶಿವಮೊಗ್ಗಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಕವಿರಾಜ್ ಅವರು ದೊರೆತ ಸರ್ಕಾರಿ ಕ್ಲರ್ಕ್ ಹುದ್ದೆಯನ್ನು ತ್ಯಜಿಸಿ, ಬೆಂಗಳೂರಿನತ್ತ ಪಯಣ ಬೆಳೆಸಿದರು. ಒಂದೂವರೆ ವರ್ಷಗಳ ಕಾಲ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ನಿರ್ವಹಿಸಿದ ಕವಿರಾಜ್ ಅವರು ತಮ್ಮ ಬರವಣಿಗೆಯನ್ನೇ ಬಂಡವಾಳ ಮಾಡಿಕೊಂಡು ಏನಾದರೂ ಸಾಧಿಸಬೇಕೆಂಬ ಛಲ ತೊಟ್ಟರು.
ಕರಿಯ ಚಿತ್ರದ ಮೂಲಕ ಭರ್ಜರಿ ಎಂಟ್ರಿ!
ಗುರುಕಿರಣ್ ಅವರಿಗೆ ‘ಅಮ್ಮಂಗೇನು ಗೊತ್ತು’ ಎಂಬ ತಾವು ಬರೆದ ಕವಿತೆಯನ್ನು ತೋರಿಸುವ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಕರಿಯ ಚಿತ್ರದ ನನ್ನಲಿ ನಾನಿಲ್ಲ ಇವರ ಮೊದಲ ಗೀತೆ. 2003ರಲ್ಲಿ ಕರಿಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಬಳಿಕ ಅವರು ಹಿಂತಿರುಗಿ ನೋಡಿಲ್ಲ..!.
ಗೋಕರ್ಣ, ಕುಟುಂಬ, ಆಪ್ತಮಿತ್ರ ಮೊದಲಾದ ಸಾಲು ಸಾಲು ಚಿತ್ರಗಳಿಗೆ ಗೀತರಚನೆ ಮಾಡುವ ಮೂಲಕ ಬರವಣಿಗೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಸರ್ಕಾರಿ ಕೆಲಸ ಮತ್ತು ಮೆಡಿಕಲ್ ಕೆಲಸವನ್ನು ತೊರೆದ ಪರಿಣಾಮ ತಂದೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಗುರುಕಿರಣ್ ಸಂಗೀತ ನಿರ್ದೇಶನ ಇರುವ ಚಿತ್ರಗಳಿಗೆ ಹೆಚ್ಚು ಸಾಹಿತ್ಯವನ್ನು ರಚಿಸಿದ್ದಾರೆ. ಪಾರ್ಥ ಚಿತ್ರದ ‘ಈ ಪ್ರೀತಿ ಒಂಥರ ಕಚಗುಳಿ’ ತಕ್ಷಣಕ್ಕೆ ಬರೆದ ಹಾಡಾದರೆ, ಕಂಠಿ ಚಿತ್ರದ ‘ಬಾನಿಂದ ಬಾ ಚಂದಿರ’ ಅತಿ ಹೆಚ್ಚು ತಲೆಕೆಡಿಸಿಕೊಂಡು ರಚಿಸಿದ ಗೀತೆಯಾಗಿದೆ.
23 ವರ್ಷಗಳ ಚಿತ್ರ ರಂಗದ ಪಯಣ!
ಇಪ್ಪತ್ತಮೂರು ವರ್ಷಗಳಿಂದ ಚಿತ್ರರಂಗದಲ್ಲಿ ಗೀತರಚನಾಕಾರರಾಗಿ ತೊಡಗಿಸಿಕೊಂಡಿರುವ ಕವಿರಾಜ್ ಅವರು 2016ರಲ್ಲಿ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು. 2019ರಲ್ಲಿ ತೆರೆಕಂಡ ಇವರ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಯಶಸ್ಸನ್ನು ಪಡೆಯಿತು.
ಸಂಜು ವೆಡ್ಸ್ ಗೀತಾ ಚಿತ್ರದ ‘ಗಗನವೇ ಬಾಗಿ’ ಗೀತೆಗೆ 2011ರಲ್ಲಿ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ, 2009, 2011, 2013 ಮತ್ತು 2015ರಲ್ಲಿ ನಾಲ್ಕು ಬಾರಿ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2010 ರಲ್ಲಿ ತೆರೆಕಂಡ ಆಪ್ತರಕ್ಷಕ ಮತ್ತು 2011ರಲ್ಲಿ ತೆರೆಕಂಡ ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಂಕಣ ಟೀಂ ಕಟ್ಟಿ ಸಮಾಜ ಸೇವೆಯಲ್ಲೂ ಮುಂಚೂಣಿ
ಕಂಕಣ ಕನ್ನಡ ಪರ ಸಂಘಟನೆ ಕಟ್ಟಿ ಬೆಂಗಳೂರಲ್ಲಿ ಕನ್ನಡದ ಕಾಯಕದಲ್ಲಿ ತೊಡಗಿರುವ ಕವಿರಾಜ್ ಕರೋನಾ ಸಮಯದಲ್ಲಿ ನೂರಾರು ಮಂದಿಗೆ ಆಕ್ಸಿಜೆನ್ ಮಿಷನ್ ನೀಡುವ ಮೂಲಕ ಸಮಾಜ ಸೇವೆಯಲ್ಲಿ ಮಾದರಿ ಆಗಿದ್ದಾರೆ. ತಮ್ಮದೇ ಆದ ಸ್ನೇಹಿತರ ಬಳಗ ಕಟ್ಟಿಕೊಂಡಿರುವ ಕವಿರಾಜ್ ಮಲೆನಾಡಿನ ಹೆಮ್ಮೆಯಚಿತ್ರ ಗೀತರಚನೆಕಾರ ಆಗಿದ್ದಾರೆ.








