ಕರಾವಳಿ ಟಾಪ್ ನ್ಯೂಸ್
ಮಾವಿನ ಹಣ್ಣು ಕೊಯ್ಯಲು ಹೋಗಿ ವಿದ್ಯುತ್ ಹೊಡೆದು ಸಾವು!
• ಪುತ್ತೂರು: ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು
• ಬೈಂದೂರು: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಕಳುವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಮಾವಿನ ಹಣ್ಣು ಕೊಯ್ಯಲು ಹೋಗಿ ವಿದ್ಯುತ್ ಹೊಡೆದು ಸರ್ಕಾರಿ ನೌಕರರೊಬ್ಬರು ಸಾವು ಕಂಡಿರುವ ಘಟನೆ ನಡೆದಿದೆ.ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ-ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಅಲೆವೂರು ನಿವಾಸಿ ಸದಾನಂದ (56) ಅವರು ಶುಕ್ರವಾರ ಬೆಳಿಗ್ಗೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಬೆಳಿಗ್ಗೆ ಎಂದಿನಂತೆ ಕಚೇರಿಗೆ ಆಗಮಿಸಿದ್ದ ಅವರು, ಆವರಣದ ಹಿಂಭಾಗದಲ್ಲಿದ್ದ ಮಾವಿನ ಮರ ಹತ್ತಿ ಹಣ್ಣು ಕೊಯ್ಯಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಮರದ ಕೊಂಬೆಗಳ ನಡುವೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಚೇರಿಯಲ್ಲಿ ಶೋಕ:ಸರಳ ಸಜ್ಜನಿಕೆಗೆ ಹೆಸರಾಗಿದ್ದ ಸದಾನಂದ ಅವರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅನಿರೀಕ್ಷಿತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಚೇರಿಯ ನೌಕರರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಪುತ್ತೂರು: ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು
ಪುತ್ತೂರು: ಬಿಎಸ್ಎನ್ಎಲ್ ಕಛೇರಿಯಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಪಡ್ನೂರು ಗ್ರಾಮದಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಅಜೇಯನಗರ ನಿವಾಸಿ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಮನೆಯಲ್ಲೇ ಇದ್ದ ಚಂದ್ರಶೇಖರ್ ಅವರು ಪತ್ನಿ ಔಷಧಿಗಾಗಿ ಪುತ್ತೂರಿಗೆ ತೆರಳಿದ್ದ ಸಂದರ್ಭದಲ್ಲಿ, ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವ ಮಾಹಿತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ.
• ಬೈಂದೂರು: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿಗಳು ಕಳುವು
ಬೈಂದೂರು: ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಹಣವನ್ನು ಕಳುವು ಮಾಡಿರುವ ಘಟನೆ, ಗುರುವಾರ ನಡುರಾತ್ರಿ ಎಸ್ ಬಿಐ ಬ್ಯಾಂಕ್ ಸಮೀಪ ನಡೆದಿದೆ. ರಾಜಸ್ಥಾನ ಮೂಲದ ರಾವಲ್ ಸಿಂಗ್ ಅವರು ಎಲೆಕ್ಟ್ರಿಕಲ್ ಪ್ಲಂಬಿಂಗ್ ಅಂಗಡಿಯನ್ನು ಇರಿಸಿದ್ದರು. ಕಳೆದ ಎರಡು ಮೂರು ದಿನಗಳಿಂದ ಬ್ಯಾಂಕ್ ನ ಎಟಿಎಂ ಡೆಪೋಸಿಟ್ ಮೆಷಿನ್ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಆಗಿರುವ ವ್ಯವಹಾರದ ಸುಮಾರು 6 ಲಕ್ಷ ರೂಪಾಯಿಗಳಷ್ಟು ನಗದು ಹಣವನ್ನು ಮನೆಯ ಕಪಾಟಿನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ನಡುರಾತ್ರಿಯಲ್ಲಿ ಬಂದ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು, ಒಳನುಗ್ಗಿ, 6 ಲಕ್ಷ ರೂಪಾಯಿ ನಗದು ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾವಲ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







