ಉಡುಪಿ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಒತ್ತಡವನ್ನು ನಿವಾರಿಸುವ ಸಲುವಾಗಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿಯ ಮೇರೆಗೆ ನೈರುತ್ಯ ರೈಲ್ವೆಯು ರೈಲು ಸಂಖ್ಯೆ 06591/06592 ಯಶವಂತಪುರ – ಮಡಗಾಂವ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಪಡೀಲ್ ಮಾರ್ಗವಾಗಿ ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ರೈಲು ದಿನಾಂಕ 11.09.2026ರ ಶುಕ್ರವಾರ ರಾತ್ರಿ ಯಶವಂತಪುರ ನಿಲ್ದಾಣದಿಂದ 23.55 ಗಂಟೆಗೆ ಹೊರಡಲಿದ್ದು, ಮಾರನೇ ದಿನ ಮಧ್ಯಾಹ್ನ ಉಡುಪಿ ನಿಲ್ದಾಣಕ್ಕೆ 13.10 ಗಂಟೆಗೆ ಆಗಮಿಸಿ 13.12ಕ್ಕೆ ಹೊರಡುತ್ತದೆ. ನಂತರ ಕುಂದಾಪುರ ನಿಲ್ದಾಣಕ್ಕೆ 13.40 ಗಂಟೆಗೆ ಆಗಮಿಸಿ 13.42ಕ್ಕೆ ಹೊರಡುವ ಈ ರೈಲು, ಕಾರವಾರ ನಿಲ್ದಾಣಕ್ಕೆ ಸಂಜೆ 16.50 ಗಂಟೆಗೆ ಆಗಮಿಸಿ 16.52ಕ್ಕೆ ಹೊರಡುತ್ತದೆ. ಮಾರ್ಗ ಮಧ್ಯದಲ್ಲಿ ಈ ರೈಲು ಪಡೀಲ್ ನಿಲ್ದಾಣದ ಮೂಲಕ ಹಾದುಹೋಗಲಿದ್ದು, ಅಂತಿಮವಾಗಿ ಮಡಗಾಂವ್ ನಿಲ್ದಾಣವನ್ನು 12.09.2026ರ ಶನಿವಾರ ಸಂಜೆ 18.10 ಗಂಟೆಗೆ ತಲುಪಲಿದೆ.
ಹಬ್ಬ ಮುಗಿಸಿದ ನಂತರ ಈ ರೈಲು ದಿನಾಂಕ 14.09.2026ರ ಸೋಮವಾರ ಬೆಳಿಗ್ಗೆ ಮಡಗಾಂವ್ನಿಂದ 11.00 ಗಂಟೆಗೆ ಹೊರಟು, ಕಾರವಾರ ನಿಲ್ದಾಣಕ್ಕೆ 11.58 ಗಂಟೆಗೆ ಆಗಮಿಸಿ 12.00ಕ್ಕೆ ಹೊರಡುತ್ತದೆ. ಬಳಿಕ ಕುಂದಾಪುರ ನಿಲ್ದಾಣಕ್ಕೆ ಮಧ್ಯಾಹ್ನ 14.40 ಗಂಟೆಗೆ ಆಗಮಿಸಿ 14.42ಕ್ಕೆ, ಉಡುಪಿ ನಿಲ್ದಾಣಕ್ಕೆ 15.30 ಗಂಟೆಗೆ ಆಗಮಿಸಿ 15.32ಕ್ಕೆ ಹೊರಡುವ ಈ ರೈಲು, ಮಾರನೇ ದಿನ ಅಂದರೆ 15.09.2026ರ ಮಂಗಳವಾರ ನಸುಕಿನ 03.00 ಗಂಟೆಗೆ ಬೆಂಗಳೂರು ತಲುಪಲಿದೆ.
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಉಡುಪಿ, ಕುಂದಾಪುರ, ಕಾರವಾರ ಮಾರ್ಗವಾಗಿ ಮಡಗಾಂವ್ಗೆ ಪ್ರಯಾಣಿಸುವ ಹಾಗೂ ಹಿಂತಿರುಗುವ ಪ್ರಯಾಣಿಕರು ಈ ವಿಶೇಷ ರೈಲಿನ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಸುಗಮ ಹಾಗೂ ಸುರಕ್ಷಿತ ಪ್ರಯಾಣ ಕೈಗೊಳ್ಳಬೇಕೆಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದ್ದಾರೆ.







