ಮೂಲ್ಕಿ: ಸೆಪ್ಟೆಂಬರ್ 1ರಂದು ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೇವಾಲಯದಲ್ಲಿ ಕಳುವು ಪ್ರಕರಣ ನಡೆದಿದ್ದು, ಅದಕ್ಕೆ ಕಾರಣರಾದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಗುರುವಾರದಂದು ಬಂಧಿಸಿದ್ದಾರೆ. ಆರೋಪಿಗಳನ್ನು ಹೆಜಮಾಡಿ ಗ್ರಾಮದ ನಿವಾಸಿ ಜಾಹೀದ್ ಸಿನಾನ್, ಕಾರ್ಕಳ ತಾಲ್ಲೂಕಿನ ನಿಟ್ಟೆಯ ಪೋಸ್ಟ್ ಪಡ್ಡೆ ಅಂಗಡಿ ಹವಸ್ ನಿವಾಸಿ ಯಾಸೀನ್, ದಾವಣಗೆರೆಯ ಗೋಕುಲನಗರ ನಿವಾಸಿ ಮೊಹಮ್ಮದ್ ಅಫ್ರಿದ್, ದಾವಣಗೆರೆಯ ಜಾಲಿನಗರ ನಿವಾಸಿ ಅಬ್ದುಲ್ ಜುಮ್ಮಾನ್ ಎಂದು ಗುರುತಿಸಲಾಗಿದೆ. ದೇವಾಲಯದ ಗರ್ಭಗುಡಿಯ ಮುಖ್ಯದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಗರ್ಭಗುಡಿಯಲ್ಲಿದ್ದ ಕೊರ್ದಬ್ಬು ದೈವದ ಮೂರ್ತಿಗಳು ಮತ್ತು ದೈವದ ಚಿನ್ನಾಭರಣಗಳನ್ನು ಕಳುವು ಮಾಡಲಾಗಿತ್ತು. ಆರೋಪಿಗಳ ಬಳಿಯಿದ್ದ 4ಕೆಜಿ 521 ಗ್ರಾಂ ತೂಕದ ಬೆಳ್ಳಿ, 34.820 ಗ್ರಾಂ ತೂಕದ ಚಿನ್ನಾಭರಣಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು 17.20.000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
•ಬೈಂದೂರು: ಸರಣಿ ಅಪಘಾತ; ವ್ಯಕ್ತಿ ಸಾವು
ಬೈಂದೂರು: ಸರಕು ತುಂಬಿದ ಲಾರಿ, ನಾಲ್ಕು ಬೈಕ್ ಮತ್ತು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪೊಲೀಸರ ಗಸ್ತು ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ, ಶಿರೂರು ಗ್ರಾಮದ ನರ್ಗದ್ದೆ ಹೊಟೇಲ್ ಶಿವಸಾಗರದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಉಡುಪಿಯಿಂದ ಭಟ್ಕಳಕ್ಕೆ ಗುಜರಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯೊಂದು ಬ್ಲೇಡ್ ಸೆಟ್ ತುಂಡಾದ ಕಾರಣ ಮಗುಚಿ ಬಿದ್ದಿತ್ತು ಎನ್ನಲಾಗಿದೆ. ಆಗ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಅನ್ನು ಇಟ್ಟು ವಾಹನ ತೆರವು ಕಾರ್ಯಾಚರಣೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಏಕಾಏಕಿ ಕಣ್ಣನ್ ಎನ್ನುವವನು ಚಲಾಯಿಸುತ್ತಿದ್ದ ಸರಕು ತುಂಬಿದ ಲಾರಿಯೊಂದು ತಿರುವು ಮತ್ತು ಇಳಿಜಾರು ರಸ್ತೆಯಲ್ಲಿ ಅತಿ ವೇಗವಾಗಿ ಬಂದಿದ್ದರಿಂದ ನಿಯಂತ್ರಣ ತಪ್ಪಿ, ಬ್ಯಾರಿಕೇಡ್ ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್ ಗಳಿಗೆ ಢಿಕ್ಕಿ ಹೊಡೆದು, ನಂತರ ಪೊಲೀಸರ ಗಸ್ತು ವಾಹನಕ್ಕೂ ಗುದ್ದಿದೆ. ಪರಿಣಾಮವಾಗಿ ಒಂದು ಬೈಕ್ ನಲ್ಲಿ ಕುಳಿತಿದ್ದ ಸವಾರ ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿಯನ್ನು ಶಿರೂರಿನ ನಾಗೇಂದ್ರ ಮಲ್ಯ ಎಂದು ಗುರುತಿಸಲಾಗಿದೆ. ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಸಮಯದಲ್ಲಿ ಭಾರಿ ಪ್ರಮಾಣದ ಶಬ್ದ ಉಂಟಾಗಿದ್ದು, ಲಾರಿ ತೆರುವು ಕಾರ್ಯಾಚರಣೆಯನ್ನು ವೀಕ್ಷಿಸುತ್ತಾ ನಿಂತಿದ್ದ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ತಪ್ಪಿಸಿಕೊಂಡಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಬಹುದಾಗಿದ್ದ ಅಪಾಯವನ್ನು ತಡೆಗಟ್ಟಿದಂತಾಗಿದೆ.
•ಮೂಡಬಿದರೆ: ಗಾಂಜಾ ಸೇವನೆ; ಆರೋಪಿ ಸೆರೆ
ಮೂಡಬಿದರೆ: ನಿರ್ಜನ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದ ಘಟನೆ, ಬುಧವಾರದಂದು ಪ್ರಾಂತ್ಯ ಗ್ರಾಮದ ಕೀರ್ತಿನಗರದ ಉದ್ಯಾನವನದ ಸಮೀಪದಲ್ಲಿ ನಡೆದಿದೆ. ಪೊಲೀಸ್ ಉಪನಿರೀಕ್ಷಕರಾದ ಕೃಷ್ಣಪ್ಪ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕೀರ್ತಿನಗರದ ಉದ್ಯಾನವನದ ಬಳಿಯ ನಿರ್ಜನ ಪ್ರದೇಶದಲ್ಲಿ ಅಮಲು ಪದಾರ್ಥ ಸೇವಿಸುತ್ತಿರುವ ಕುರಿತು ಮಾಹಿತಿ ಲಭಿಸಿದೆ. ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ, ಆತನನ್ನು ಸೆರೆಹಿಡಿದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಯನ್ನು ಮಾರೂರು ನೆತ್ತೋಡಿಯ ರಂಜಿತ್ ರಾವ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಉಡುಪಿ: ಹಡಗಿನಿಂದ ನೀರಿಗೆ ಬಿದ್ದು ಮೀನುಗಾರ ಸಾವು
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಹಡಗಿನಿಂದ ಆಕಸ್ಮಿಕವಾಗಿ ಧಕ್ಕೆಗೆ ಬಿದ್ದು ಮೀನುಗಾರರೊಬ್ಬರು ಸಾವನ್ನಪ್ಪಿರುವ ಘಟನೆ, ಬುಧವಾರದಂದು ಮಲ್ಪೆ ಬಂದರಿನಲ್ಲಿ ನಡೆದಿದೆ. ಮೃತ ಮೀನುಗಾರನನ್ನು ದಯಾನಂದ ಕೋಡಾರಕರ ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಿಗ್ಗೆ ಐದು ಗಂಟೆಗೆ ಶ್ರೀಕೃಷ್ಣ ತೀರ್ಥ ಎನ್ನುವ ಹೆಸರಿನ ಹಡಗಿನಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ದಯಾನಂದ ಅವರು, ಅದೇ ದಿನ ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಲ್ಪೆ ಬಂದರಿಗೆ ಹಿಂತಿರುಗಿದ್ದರು ಎನ್ನಲಾಗಿದೆ. ಬಲೆ ಬೀಸಿ ಹಿಡಿದಿದ್ದ ಮೀನುಗಳನ್ನು ಹಡಗಿನಿಂದ ಖಾಲಿ ಮಾಡಿ, ಅದನ್ನು ಮಲ್ಪೆ ಬಂದರಿನಲ್ಲಿ ನಿಲ್ಲಿಸಲಾಗಿತ್ತು. ಬಳಿಕ ದಯಾನಂದ ಅವರೊಂದಿಗಿದ್ದ ಮೀನುಗಾರರು ತಮ್ಮ ಕೊಠಡಿಗೆ ತೆರಳಿದ್ದರು ಎನ್ನುವ ಮಾಹಿತಿ ಲಭಿಸಿದೆ. ಆದರೆ ದಯಾನಂದ ಅವರು ಮತ್ತೆ ಮೀನುಗಾರಿಕೆಗೆ ತೆರಳುವ ಸಲುವಾಗಿ ಬಲೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ದಯಾನಂದ ಅವರು ಆಕಸ್ಮಿಕವಾಗಿ ಹಡಗಿನಿಂದ ಧಕ್ಕೆಗೆ ಬಿದ್ದಿದ್ದು, ನೀರಿನಲ್ಲಿ ಕಾಣೆಯಾಗಿದ್ದಾರೆ. ವಿಚಾರ ತಿಳಿದು ಇತರ ಮೀನುಗಾರರು, ಸ್ಥಳೀಯರು ಸೇರಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಗುರುವಾರದಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ನೀರಿನಲ್ಲಿ ದಯಾನಂದ ಅವರ ಮೃತದೇಹ ಪತ್ತೆಯಾಯಿತು ಎನ್ನುವ ಸಂಗತಿ ತಿಳಿದುಬಂದಿದೆ.







