ಶಿವಮೊಗ್ಗ/ ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಹಾವು ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದಲೇ 24/7 ಉಚಿತ ಉರಗ ರಕ್ಷಣಾ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಹಾವು ರಕ್ಷಣೆಯ ಹೆಸರಿನಲ್ಲಿ ಸಾರ್ವಜನಿಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ತೀರ್ಥಹಳ್ಳಿ ತಾಲ್ಲೂಕಿನ ಹೊದಲ ಗ್ರಾಮದ ಅಕ್ಷಯ್ ಕೆ.ಎಂ. ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ಹಾಗೂ ಭೌಗೋಳಿಕ ಪರಿಸ್ಥಿತಿಗಳ ಕಾರಣದಿಂದ ವಿಷಪೂರಿತ ಹಾವುಗಳು ಮನೆ, ಅಡುಗೆಮನೆ ಹಾಗೂ ದನದ ಕೊಟ್ಟಿಗೆಗಳಿಗೆ ಪ್ರವೇಶಿಸುವ ಘಟನೆಗಳು ಹೆಚ್ಚಾಗುತ್ತಿವೆ. ಹಂಚಿನ ಮನೆ, ಮಣ್ಣಿನ ಗೋಡೆ ಹಾಗೂ ತೆರೆದ ಕಿಟಕಿಗಳಿರುವ ಬಡ ಕುಟುಂಬಗಳು ಇಂತಹ ಸಂದರ್ಭಗಳಲ್ಲಿ ತೀವ್ರ ಆತಂಕ ಎದುರಿಸುತ್ತಿವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಹಾವು ರಕ್ಷಣೆಗೆ ತರಬೇತಿ ಪಡೆದ ಅನುಭವಿ ಸಿಬ್ಬಂದಿಗಳ ಕೊರತೆಯಿಂದಾಗಿ ಹೊರಗಿನ ರಕ್ಷಕರು ಅಥವಾ ಖಾಸಗಿ ವ್ಯಕ್ತಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಉರಗ ರಕ್ಷಕರು ಒಂದು ಹಾವಿನ ರಕ್ಷಣೆಗೆ ₹3,000ರಿಂದ ₹5,000ರವರೆಗೆ ಶುಲ್ಕ ವಸೂಲಿ ಮಾಡುತ್ತಿರುವುದು ಬಡ ಕುಟುಂಬಗಳು ಹಾಗೂ ದಿನಗೂಲಿ ಕಾರ್ಮಿಕರಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ಅಕ್ಷಯ್ ಕೆ.ಎಂ. ಅವರು ಗಮನ ಸೆಳೆದಿದ್ದಾರೆ.
ಹಾವು ರಕ್ಷಣೆಗೆ ಹಣ ಪಾವತಿಸಲು ಸಾಧ್ಯವಾಗದ ಕೆಲವರು ತಾವೇ ಹಾವನ್ನು ಹಿಡಿಯಲು ಅಥವಾ ಓಡಿಸಲು ಮುಂದಾಗಿ ಸರ್ಪದಂಶಕ್ಕೆ ಒಳಗಾಗುವ ಅಪಾಯವಿದೆ. ಮತ್ತೊಂದೆಡೆ, ಅಸಹಾಯಕತೆಯಿಂದ ಹಾವುಗಳನ್ನು ಕೊಲ್ಲುವಂತಹ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ. ಇದರಿಂದ ಜನರ ಜೀವ ಹಾಗೂ ವನ್ಯಜೀವಿ ಸಂರಕ್ಷಣೆ ಎರಡಕ್ಕೂ ಅಪಾಯ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ಸ್ಥಳೀಯ ಅರ್ಹ ಹಾಗೂ ತರಬೇತಿ ಪಡೆದ ಉರಗ ರಕ್ಷಕರನ್ನು ಅರಣ್ಯ ಇಲಾಖೆಯಡಿ ನೋಂದಾಯಿಸಿ, ಅವರಿಗೆ ಇಲಾಖೆಯಿಂದಲೇ ಗೌರವಧನ ಹಾಗೂ ಪ್ರಯಾಣ ಭತ್ಯೆ ನೀಡಬೇಕು.
ಸಾರ್ವಜನಿಕರಿಂದ ಯಾವುದೇ ಶುಲ್ಕ ಪಡೆಯದಂತೆ ಉಚಿತ ಉರಗ ರಕ್ಷಣಾ ಸೇವೆ ಕಲ್ಪಿಸಬೇಕು.
ಹಾವು ರಕ್ಷಣೆಯ ಹೆಸರಿನಲ್ಲಿ ₹3,000–₹5,000ರವರೆಗೆ ಅಕ್ರಮವಾಗಿ ಹಣ ವಸೂಲಿ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಬೇಕು.
ಪ್ರತಿ ತಾಲ್ಲೂಕು ಹಾಗೂ ವನ್ಯಜೀವಿ ವಲಯ ಮಟ್ಟದಲ್ಲಿ 24/7 ಉಚಿತ ಸಹಾಯವಾಣಿ ಸ್ಥಾಪಿಸಿ, ಅದರ ಸಂಖ್ಯೆಯನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಿಳಿಸಬೇಕು.
ತರಬೇತಿ ಪಡೆದ ಸ್ಥಳೀಯ ಉರಗ ರಕ್ಷಕರು ಹಾಗೂ ವನ್ಯಜೀವಿ ಸಂಶೋಧಕರು ಅರಣ್ಯ ಇಲಾಖೆಯೊಂದಿಗೆ ಸುಲಭವಾಗಿ ಸಮನ್ವಯ ಸಾಧಿಸಲು ಸರಳ ಹಾಗೂ ಪ್ರಾಯೋಗಿಕ ಮಾರ್ಗಸೂಚಿಗಳನ್ನು ರೂಪಿಸಬೇಕು.
ಮಲೆನಾಡಿನ ನಾಗರಿಕರ ಅಮೂಲ್ಯ ಜೀವ ಹಾಗೂ ವನ್ಯಜೀವಿಗಳೆರಡನ್ನೂ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡು ಜನಸ್ನೇಹಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅಕ್ಷಯ್ ಕೆ.ಎಂ. ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಮನವಿಯನ್ನು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ, ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಹಿರಿಯ ಅರಣ್ಯ ಅಧಿಕಾರಿಗಳಿಗೂ ಪ್ರತಿಯನ್ನು ಕಳುಹಿಸಲಾಗಿದೆ.
ಹೆಚ್ಚಿದ ಹಾವುಗಳು… ಆದ್ರೆ ಯಾವುದೇ ಕ್ರಮ ಇಲ್ಲ..
ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ನಮ್ಮ ವಸತಿ ಪ್ರದೇಶಗಳು, ಗ್ರಾಮೀಣ ಬಡಾವಣೆಗಳು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ಮಳೆಗಾಲ ಮತ್ತು ಭೌಗೋಳಿಕ ಪರಿಸ್ಥಿತಿಯಿಂದಾಗಿ ಕಾಳಿಂಗ ಸರ್ಪ, ನಾಗರಹಾವು ಹಾಗೂ ಮಂಡಲದ ಹಾವುಗಳಂತಹ ತೀವ್ರ ವಿಷಪೂರಿತ ಹಾವುಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಇವು ಜನವಸತಿ ಮನೆಗಳು, ದನದ ಕೊಟ್ಟಿಗೆಗಳು ಹಾಗೂ ಅಡುಗೆ ಮನೆಗಳಿಗೂ ನುಗ್ಗುತ್ತಿವೆ. ಗ್ರಾಮೀಣ ಭಾಗದ ಬಡ ಕುಟುಂಬಗಳ ಮನೆಗಳು ಹಂಚಿನ ಮಾಡು, ಮಣ್ಣಿನ ಗೋಡೆ ಹಾಗೂ ತೆರೆದ ಕಿಂಡಿಗಳಿಂದ ಕೂಡಿರುವುದರಿಂದ ಸಾರ್ವಜನಿಕರು ಪ್ರತಿನಿತ್ಯ ತೀವ್ರ ಜೀವಭಯದಲ್ಲಿ ಬದುಕುವಂತಾಗಿದೆ.
ಅಕ್ಷಯ್ ಕೆ. ಜವಾಬ್ದಾರಿಯುತ ನಾಗರಿಕರು,ಹೊದಲ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮೊಬೈಲ್: +91 94834 35479







