ಕೊಪ್ಪ: ಜುಲೈ ತಿಂಗಳಿನಲ್ಲಿ ಗಡಿಕಲ್ ಚೆಕ್ ಪೋಸ್ಟ್ ಬಳಿ ನಡೆದ ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಇಬ್ಬರು ವ್ಯಕ್ತಿಗಳು ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮುಬಾರಕ್ ಅಲಿಯಾಸ್ ಮುಬೀನಾ ಮತ್ತು ಅಹ್ಮದ್ ಬೇಗ್ ಅಲಿಯಾಸ್ ಚಾಂದ್ ಪಾಷಾ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
•ನರಸಿಂಹರಾಜಪುರ: ಭೀಕರ ಆಟೋ ಅಪಘಾತ; ಮಹಿಳೆ ಸಾವು
ನರಸಿಂಹರಾಜಪುರ: ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರೊಬ್ಬರನ್ನು ಮಾತನಾಡಿಸಿಕೊಂಡು, ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ, ಬಾಳೆಹೊನ್ನೂರಿನ ಕಾರ್ಗದ್ದೆ ಹಳ್ಳದ ಬಳಿಯಲ್ಲಿ ನಡೆದಿದೆ. ನಡೆದಿದೆ. ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಆಟೋ ಚಾಲಕರಾದ ಪ್ರಭಾಕರ್, ಪ್ರಯಾಣಿಕರಾದ ಶ್ರೀನಿವಾಸ್, ಅವರ ಪತ್ನಿ ಸುಮಾ ಮತ್ತು ಕೃಷ್ಣ ಅವರು ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುಮಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶ್ರೀನಿವಾಸ್, ಕೃಷ್ಣ ಮತ್ತು ಪ್ರಭಾಕರ್ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕೃಷ್ಣ ಅವರು ನೀಡಿರುವ ಹೇಳಿಕೆಯ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಹಣ ಕದ್ದು ಬ್ಯಾಗ್ ನೀರಿನ ಟ್ಯಾಂಕಿಗೆ ಎಸೆದ ಖದೀಮರು!
ಸಾಗರ: ವ್ಯಾನಿಟಿ ಬ್ಯಾಗ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಖದೀಮರು ಲಪಟಾಯಿಸಿರುವ ಘಟನೆ ನಡೆದಿದೆ. ಬಳಿಕ ಕಳ್ಳರು ವ್ಯಾನಿಟಿ ಬ್ಯಾಗ್ ಅನ್ನು ನೀರಿನ ಟ್ಯಾಂಕ್ ನಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಮಹಿಳೆಯೊಬ್ಬರು ಮನೆಯ ಮಾಲೀಕರಿಂದ 2.58.000 ರೂಪಾಯಿಗಳನ್ನು ಪಡೆದುಕೊಂಡಿದ್ದು, ಅದರಲ್ಲಿ ಅನಾರೋಗ್ಯದ ಕಾರಣಕ್ಕಾಗಿ ಸುಮಾರು 4000 ರೂಪಾಯಿಗಳಷ್ಟು ಹಣವನ್ನು ವ್ಯಯಮಾಡಿ, ಉಳಿದ 2.54.000 ರೂಪಾಯಿಗಳಷ್ಟು ಹಣವನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇರಿಸಿ, ಬೀರುವಿನಲ್ಲಿ ಇಟ್ಟಿದ್ದರು ಎನ್ನುವ ಮಾಹಿತಿ ಲಭಿಸಿದೆ. ಇದರ ಮರುದಿನ ಪರಿಚಿತ ವ್ಯಕ್ತಿಯೊಬ್ಬರು ಆ ಮಹಿಳೆಯಿಂದ 30.000 ರೂಪಾಯಿ ಹಣವನ್ನು ಪಡೆದುಕೊಂಡಿದ್ದು, ಅದನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ. ಆಗ ಮಹಿಳೆಯು ವ್ಯಕ್ತಿಯು ನೀಡಿದ ಹಣವನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇರಿಸಲು ಹೋದಾಗ ಹಣ ಕಳುವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಮಹಿಳೆಯು ಮನೆಯ ತುಂಬಾ ವ್ಯಾನಿಟಿ ಬ್ಯಾಗ್ ಗಾಗಿ ಹುಡುಕಾಟ ನಡೆಸಿದಾಗ, ಅಂತಿಮವಾಗಿ ಅದು ಕೋಣೆಯೊಂದರ ನೀರಿನ ಟ್ಯಾಂಕ್ ನಲ್ಲಿ ಕಂಡುಬಂದಿದ್ದು, ಅದರಲ್ಲಿ ಹಣವಿಲ್ಲದೆ ಖಾಲಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಮಹಿಳೆಯು ಮಾಲೀಕರಿಂದ ಪಡೆದ ಹಣದಲ್ಲಿದ್ದ ಗುರುತಿನ ಕಲೆಯು, ಪರಿಚಿತ ವ್ಯಕ್ತಿಯು ನೀಡಿರುವ 30.000 ರೂಪಾಯಿ ಹಣದಲ್ಲೂ ಕಾಣಿಸಿಕೊಂಡಿದ್ದು, ಮಹಿಳೆಗೆ ಪರಿಚಿತ ವ್ಯಕ್ತಿಯು ತನ್ನ ಹಣವನ್ನೇ ಕಳುವು ಮಾಡಿ, ಅದರಲ್ಲಿ 30.000 ರೂಪಾಯಿ ಹಣವನ್ನು ತನಗೆ ಹಿಂತಿರುಗಿಸಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ: ಗೋ ಶಾಲೆಯಿಂದ ಅಕ್ರಮ ಗೋ ಸಾಗಾಟ?!
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಗೋಶಾಲೆಯಿಂದಲೇ ಅಕ್ರಮವಾಗಿ ಗೋಸಾಗಾಟ ನಡೆದಿದೆ. ಅಕ್ರಮವಾಗಿ ಗೋ ಸಾಗಿಸುತ್ತಿದ್ದ ವಾಹನ ಹಾಗೂ ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಮೇಲಿನ ಕುರುವಳ್ಳಿ ಭಾಗದ ವ್ಯಕ್ತಿ ಎನ್ನಲಾಗಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







