ಬೆಂಗಳೂರು: ಎಲ್ಪಿಜಿ ಸಿಲಿಂಡರ್ ಗೆ ಸಂಬಂಧಿಸಿದ ಇ-ಕೆವೈಸಿ ಪ್ರಕ್ರಿಯೆಗೆ ಆಗಸ್ಟ್ 31ರ ಸೋಮವಾರ ಕೊನೆಯ ದಿನವಾಗಿದ್ದು, ಅವಧಿ ಮುಗಿಯುವುದರ ಒಳಗಾಗಿ ಗ್ರಾಹಕರು ಅದನ್ನು ಪೂರ್ಣಗೊಳಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಎಲ್ಪಿಗೆ ಸಬ್ಸಿಡಿ ಮುಂದುವರಿಯಬೇಕಾದರೆ ಇ-ಕೆವೈಸಿ ಕಡ್ಡಾಯ. ಒಂದು ವೇಳೆ ಆಗಸ್ಟ್ 31ರ ಒಳಗಾಗಿ ಗ್ರಾಹಕರು ಆಧಾರ್ ಜೋಡಣೆ ಮಾಡದಿದ್ದಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಲಭ್ಯವಾಗುವ ಸಬ್ಸಿಡಿಯಿಂದ ವಂಚಿತರಾಗುತ್ತಾರೆ ಎನ್ನುವ ಎಚ್ಚರಿಕೆಯನ್ನು ತೈಲ ಕಂಪನಿಗಳು ನೀಡಿವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಸಾಲುಗಟ್ಟಿ ನಿಂತು ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಪ್ರಸ್ತುತ 14.2ಕೆಜಿ ಗೃಹಬಳಕೆ ಸಿಲಿಂಡರ್ ಗೆ 945ರೂಪಾಯಿ ಬೆಲೆ ಇದ್ದು, ಇ-ಕೆವೈಸಿ ಮಾಡಿಸಿಕೊಂಡಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300ರೂಪಾಯಿಗಳಷ್ಟು ಸಬ್ಸಿಡಿ ದೊರೆಯಲಿದೆ. ಹೀಗಾಗಿ ಸರ್ಕಾರವು ನೀಡಿರುವ ಗಡುವನ್ನು ಉಪಯೋಗಿಸಿಕೊಂಡು ಗ್ರಾಹಕರು ಇ-ಕೆವೈಸಿ ಅನ್ನು ಪೂರ್ಣಗೊಳಿಸಿಕೊಳ್ಳಬೇಕು, ಗಡುವು ಮುಗಿದ ಬಳಿಕ ಇದಕ್ಕೆ ಮತ್ತೊಮ್ಮೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಗೃಹಲಕ್ಷ್ಮೀ ಫಲಾನುಭವಿಗಳ ಪಟ್ಟಿ ಮತ್ತೊಮ್ಮೆ ಪರಿಶೀಲನೆ
ಬೆಂಗಳೂರು: ರಾಜ್ಯ ಸರ್ಕಾರವು ಹೊರಡಿಸಿರುವ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಯಾರಿ ನಡೆಸಿದೆ. ಅನರ್ಹರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ವರ್ಗಾವಣೆಗೊಳ್ಳುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ನಿರ್ಣಯವನ್ನು ಕೈಗೊಂಡಿದೆ ಎನ್ನಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಹೆಸರನ್ನು ನೋಂದಣಿ ಮಾಡಿಸಿಕೊಂಡಿರುವ ಸುಮಾರು 1.24ಕೋಟಿ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುವ ಉದ್ದೇಶವನ್ನು ಹೊಂದಿರುವ ಸರ್ಕಾರವು ಸೆಪ್ಟೆಂಬರ್ ಬಳಿಕ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೊಬೈಲ್ ಆ್ಯಪ್ ಮತ್ತು ಸಂಬಂಧಿತ ವೆಬ್ ಪೋರ್ಟಲ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡಿದೆ. ಇದರಿಂದಾಗಿ ಫಲಾನುಭವಿಗಳ ಮಾಹಿತಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಮತ್ತಷ್ಟು ಶೀಘ್ರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಆಲೋಚಿಸಲಾಗಿದೆ. ಇದರೊಂದಿಗೆ ಅಧಿಕಾರಿಗಳು ಅಥವಾ ನಿಯೋಜಿತ ಸಿಬ್ಬಂದಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಕೂಡ ಇದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಅಲ್ಲದೆ ಫಲಾನುಭವಿಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಮತ್ತು ಫೇಸ್ ಅಥೆಂಟಿಕೇಷನ್ ನಂತಹ ತಂತ್ರಜ್ಞಾನವನ್ನು ಕೂಡ ಬಳಸುವ ಕುರಿತು ಚಿಂತನೆ ನಡೆಸಲಾಗಿದೆ. ಮರುಪರಿಶೀಲನೆಯ ಸಂದರ್ಭದಲ್ಲಿ ಫಲಾನುಭವಿಗಳು ಕುಟುಂಬದ ವಿವರಗಳನ್ನು ದೃಢಪಡಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆಯ ವಿವರ, ಪತಿಯ ಹೆಸರು ಮತ್ತು ಆಧಾರ ಸಂಖ್ಯೆ, ಪಡಿತರ ಚೀಟಿಯ ವಿವರ, ಕುಟುಂಬದ ತೆರಿಗೆ ಪಾವತಿ ಮಾಹಿತಿ ಮತ್ತು ಅಗತ್ಯವಿದ್ದಲ್ಲಿ ಇತರೆ ದಾಖಲೆಗಳನ್ನು ನೀಡಬೇಕೆಂದು ತಿಳಿಸಲಾಗಿದೆ. ಯಾವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವುದು ಸರ್ಕಾರದ ಅಧಿಕೃತ ಮಾರ್ಗಸೂಚಿ ಪ್ರಕಟವಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎನ್ನಲಾಗಿದೆ.







