ಇನ್ನು ಐದು ದಿನ ಮಳೆ ಸಾಧ್ಯತೆ..!
– ರಾಜ್ಯದಲ್ಲಿ ಹೆಚ್ಚಾದ ಬಿಸಿಲಿನ ತೀವ್ರತೆ
– ಮಲೆನಾಡು, ಕರಾವಳಿ ಸೇರಿ ಎಲ್ಲೆಡೆ ಮಳೆ ಅಲರ್ಟ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಏ.24ರವರೆಗೆ ಐದು ದಿನಗಳ ಕಾಲ ಭಾರೀ ಮಳೆ ಆಗಲಿದೆ. ಈಗಾಗಲೇ ಒಂದು ವಾರದಿಂದ ಎಲ್ಲಾ ಕಡೆ ಮಳೆ ಆಗುತ್ತಿದೆ. ಉತ್ತರ ಒಳ ನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ,ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ.
ದಕ್ಷಿಣ ಒಳನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು ಗುಡುಗು ಮತ್ತು ಮಳೆಯ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.








