ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ -2025
* ಸತತ ಎರಡನೇ ಸೋಲು ಕಂಡ ಸನ್ ರೈಸರ್ಸ್
* ಚೆನ್ನೈ ವಿರುದ್ಧ ತವರಲ್ಲಿ ಗೆದ್ದ ರಾಜಸ್ಥಾನ್
NAMMUR EXPRESS SPORTS NEWS
* ಸತತ ಎರಡನೇ ಸೋಲು ಕಂಡ ಸನ್ ರೈಸರ್ಸ್
ಹೈದ್ರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿ ಐಪಿಎಲ್ 2025 ರಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 18.4 ಓವರ್ಗಳಲ್ಲಿ 163 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 16 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು. ಇದು ಸನ್ರೈಸರ್ಸ್ಗೆ ಸತತ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋಲನ್ನು ಎದುರಿಸಿತ್ತು.
ಹೊಸ ನಾಯಕ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲಿಷ್ಠ ಪ್ರದರ್ಶನ ಮುಂದುವರೆದಿದೆ. ಲಕ್ನೋ ವಿರುದ್ಧದ ಮೊದಲ ಪಂದ್ಯವನ್ನು ಕೊನೆಯ ಓವರ್ನಲ್ಲಿ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಇದೀಗ ಸತತ ಎರಡನೇ ಪಂದ್ಯವನ್ನು ಸುಲಭವಾಗಿ ಗೆದ್ದಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡವು ಕಳೆದ ಸೀಸನ್ನ ಫೈನಲಿಸ್ಟ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ದೆಹಲಿಯ ಈ ಗೆಲುವಿನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಪ್ರಮುಖ ಪಾತ್ರವಹಿಸಿದರು. ಅವರು ಪ್ರಮುಖ 5 ವಿಕೆಟ್ಗಳನ್ನು ಪಡೆದು ಸನ್ರೈಸರ್ಸ್ನ ಸ್ಫೋಟಕ ಬ್ಯಾಟಿಂಗ್ ಕನಸನ್ನು ಭಗ್ನಗೊಳಿಸಿದರು. ಆ ಬಳಿಕ 163 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿಗೆ ಫಾಫ್ ಡು ಪ್ಲೆಸಿಸ್ ಅಬ್ಬರದ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
* ಚೆನ್ನೈ ವಿರುದ್ಧ ತವರಲ್ಲಿ ಗೆದ್ದ ರಾಜಸ್ಥಾನ್
ಗುವಾಹಟಿ: ತವರು ಮೈದಾನದಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ ನಿಗದಿತ ಓವರ್ಗಳಲ್ಲಿ ಆರು ವಿಕೆಟ್ಗಳಿಗೆ 176 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಗೂ ಐಪಿಎಲ್ 2025 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದ್ದು. ಗುವಾಹಟಿಯಲ್ಲಿ ನಡೆದ ತನ್ನ ತವರು ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ರಾಜಸ್ಥಾನ್ ಕೊನೆಯ ಓವರ್ವರೆಗೆ ನಡೆದ ರೋಚಕ ಪಂದ್ಯದಲ್ಲಿ 6 ರನ್ಗಳ ಜಯ ಸಾಧಿಸಿದೆ. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ, ರಾಜಸ್ಥಾನ ಮೂರನೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತ ಮೊದಲ ಪಂದ್ಯವನ್ನು ಗೆದ್ದು ಗೆಲುವಿನ ಆರಂಭ ಪಡೆದುಕೊಂಡಿದ್ದ ಸಿಎಸ್ಕೆ, ಆ ನಂತರದ ಎರಡು ಪಂದ್ಯಗಳನ್ನು ಸೋತಿದೆ. ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 182 ರನ್ಗಳ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈ 176 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.








