ಬೆಂಗಳೂರು: ವಾಯುಭಾರ ಕುಸಿತ ಮತ್ತು ಈಶಾನ್ಯ ಮಾರುತಗಳ ಆಗಮನದ ಪರಿಣಾಮವಾಗಿ ಅಕ್ಟೋಬರ್ 22ರ ಗುರುವಾರದವರೆಗೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಭಾಗಗಳಿಗೆ ಸಂಬಂಧಿಸಿದಂತಹ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಅನ್ನು ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಂಭವ ಇರುವುದರಿಂದ ಕಡಲ ತೀರದಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಭಾನುವಾರದಂದು ಮಲೆನಾಡು ಮತ್ತು ಕರಾವಳಿ ಈ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿತ್ತು. ಮಳೆ ನಿರೀಕ್ಷೆಯಲ್ಲಿದ್ದವರಿಗೆ ಸಂತಸ ತಂದಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಕ್ಟೋಬರ್ 22ರ ಗುರುವಾರದವರೆಗೆ ಮಳೆಯ ಅಬ್ಬರ ಮುಂದುವರೆಯಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆಯಾಗಲಿದ್ದು ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸುವಂತೆ ಯೆಲ್ಲೋ ಅಲರ್ಟ್ ನ ಎಚ್ಚರಿಕೆ ನೀಡಿದೆ.







