ಕಾಪು: ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ, ಬುಧವಾರದಂದು ಪಡುಬಿದ್ರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನೀಶ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಆಡಿಟಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ವಿನೀಶ್ ಅವರು ಕಳೆದ ಕೆಲವು ತಿಂಗಳುಗಳಿಂದ ದರ್ಬೆಯ ದಿನಸಿ ಸಾಮಗ್ರಿಗಳ ಅಂಗಡಿಯೊಂದರಲ್ಲಿ ಆಡಿಟಿಂಗ್ ಕಾರ್ಯನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ವಿನೀಶ್ ಅವರು ಎಪಿಎಂಸಿ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಅಕ್ಟೋಬರ್ 6ರ ಮಂಗಳವಾರದಂದು ಸಂಜೆ ತಮ್ಮ ಕೆಲಸವನ್ನು ಮುಗಿಸಿಕೊಂಡು ಮನೆಗೆ ಮರಳಿದ ವಿನೀಶ್ ಅವರು ಅಕ್ಟೋಬರ್ 7ರ ಬುಧವಾರದಂದು ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ ಅವರಿಗೆ ಕಛೇರಿಯವರು ಎಷ್ಟೇ ಕರೆ ಮಾಡಿದರು ಸ್ವೀಕರಿಸಲಿಲ್ಲ. ಬಳಿಕ ವಿನೀಶ್ ಅವರ ಸಹೋದ್ಯೋಗಿಗಳು ಮಧ್ಯಾಹ್ನ ಊಟದ ಸಮಯ ಮತ್ತೊಮ್ಮೆ ಕರೆ ಮಾಡಿ ನೋಡಿದಾಗ ವಿನೀಶ್ ಅವರು ಕರೆಯನ್ನು ಸ್ವೀಕರಿಸದಿರುವುದಕ್ಕೆ ಅನುಮಾನಗೊಂಡು ಅವರ ಮನೆಯ ಹತ್ತಿರ ಹೋಗಿ ನೋಡಿದಾಗ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಳಿಕ ಮನೆಯ ಸ್ಲಾಬ್ ನ ಇನ್ಸುಲೇಟರ್ ಮೂಲಕ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ನೋಡಿದಾಗ ವಿನೀಶ್ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಪೊಲೀಸರಿಗೆ ಮತ್ತು ಮನೆಯವರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲನ್ನು ಒಡೆದು, ಪರಿಶೀಲನೆ ನಡೆಸಿ ವಿನೀಶ್ ಅವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
•ಕಾರ್ಕಳ: ಗೋದಾಮಿನಲ್ಲಿದ್ದ ಅಡಿಕೆ ಕಳುವು
ಕಾರ್ಕಳ: ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಗಳನ್ನು ಖದೀಮರು ಲಪಟಾಯಿಸಿರುವ ಘಟನೆ, ಬುಧವಾರದಂದು ಮಿಯ್ಯಾರು ಗ್ರಾಮದ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ರಮೇಶ್ ಶೆಟ್ಟಿ ಎನ್ನುವವರು ಗೋದಾಮಿನಲ್ಲಿ ಕೆಲಸ ಮಾಡಿಕೊಂಡಿದ್ದ ಗಣಪತಿ ಮತ್ತು ಮಂಜುನಾಥ್ ಎನ್ನುವವರು ಆಗಸ್ಟ್ 20 ರಿಂದ ಸೆಪ್ಟೆಂಬರ್ 28ರ ನಡುವೆ ಅಡಿಕೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಸುಮಾರು 95.000 ರೂಪಾಯಿಗಳಷ್ಟು ಮೌಲ್ಯದ ಅಡಿಕೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
•ಪುತ್ತೂರು: ಸಾಧಾರಣ ಮಳೆಗೆ ನ್ಯಾಯಾಲಯದ ಕಾಂಪೌಂಡ್ ಕುಸಿತ
ಪುತ್ತೂರು: ಇದೇ ವರ್ಷ ನಿರ್ಮಾಣಗೊಂಡಂತಹ ನ್ಯಾಯಾಲಯದ ಕಾಂಪೌಂಡ್ ಸಾಧಾರಣ ಮಳೆಗೆ ಧರೆಗೆ ಉರುಳಿರುವ ಘಟನೆ, ಬುಧವಾರದಂದು ಬನ್ನೂರು ಸಮೀಪದ ಆನೆಮಜಲು ಎನ್ನುವಲ್ಲಿ ನಡೆದಿದೆ. ನ್ಯಾಯಾಲಯವು ಜನವರಿ ತಿಂಗಳಿನಲ್ಲಿ ಉದ್ಘಾಟನೆಗೊಂಡಿದ್ದು, ಒಂದು ವರ್ಷ ಮುಗಿಯುವುದರೊಳಗೆ ಅದರ ಕಾಂಪೌಂಡ್ ಸಾಧಾರಣ ಮಳೆಗೆ ಧರೆಗೆ ಉರುಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಪೌಂಡ್ ಗುಣಮಟ್ಟವೇ ಈ ರೀತಿ ಇರುವಾಗ, ಇನ್ನು ನ್ಯಾಯಾಲಯದ ಕಟ್ಟಡವನ್ನು ಯಾವ ರೀತಿಯಲ್ಲಿ ನಿರ್ಮಿಸಿರಬಹುದು ಎನ್ನುವ ಆತಂಕ ಮತ್ತು ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಕಾಂಪೌಂಡ್ ಕುಸಿತದಿಂದ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.
•ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪಾರು
ಬೆಳ್ತಂಗಡಿ: ಮಹಿಳೆಯೊಬ್ಬರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಮಹಿಳೆಯು ಬಾಳೆಹೊನ್ನೂರು ಮೂಲದವರಾಗಿದ್ದು, ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಾವಣಗೆರೆಯಿಂದ ಮಂಗಳೂರಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ಸನ್ನಿವೇಶ ಎದುರಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಕೆಲವು ಕಾಲ ಮಹಿಳೆಗೆ ಮಾತನಾಡಲು ಮತ್ತು ದೇಹವನ್ನು ಚಲಿಸಲು ಸಹ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಬಸ್ ಚಾಲಕರಾದ ಕಿರಣ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ತಕ್ಷಣ ಬಸ್ ಅನ್ನು ಕಕ್ಕಿಂಜೆಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಮಹಿಳೆಯನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ. ಪರಿಣಾಮವಾಗಿ ಮಹಿಳೆಯು ಚಿಕಿತ್ಸೆಯನ್ನು ಪಡೆದುಕೊಂಡಿದ್ದರಿಂದ ಚೇತರಿಸಿಕೊಳ್ಳುವಂತಾಯಿತು. ಬಸ್ ಚಾಲಕ ಕಿರಣ್ ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಮತ್ತು ಸಾರ್ವಜನಿಕರು ಅಪಾರ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆಶ್ರಫ್ ಚಾರ್ಮಾಡಿ, ಫಾರೂಕ್ ಕಕ್ಕಿಂಜೆ ಗಾಂಧಿನಗರ, ನೌಫಲ್ ಕಕ್ಕಿಂಜೆ ಗಾಂಧಿನಗರ ಮತ್ತು ಬಸ್ ನ ನಿರ್ವಾಹಕರಾದ ಸಂತೋಷ್ ಸಂಗಪ್ಪ ಗೌಡ ಅವರು ಸಹಕಾರ ನೀಡಿದರು ಎನ್ನುವ ಸಂಗತಿ ತಿಳಿದುಬಂದಿದೆ.







