ಸಾಗರ: ದಸರಾ ರಜೆ ಮತ್ತು ಬಿಸಿಲಿನ ಬೇಗೆಯ ಹಿನ್ನೆಲೆಯಿಂದಾಗಿ ಶಾಲಾ ಮಕ್ಕಳು ನೀರಿನಲ್ಲಿ ಆಡಲು ಹೋಗಿ ಸಾವನ್ನಪ್ಪುತ್ತಿರುವ ಘಟನೆ, ಕಳೆದ ವಾರದಿಂದ ಮಲೆನಾಡು ಭಾಗದಲ್ಲಿ ಹೆಚ್ಚಳಗೊಂಡಿದೆ.
ಶೃಂಗೇರಿಯಲ್ಲಿ ದಸರಾಗೆ ಬಂದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು ಕಂಡಿರುವ ಘಟನೆ ಮಾಸುವ ಮುನ್ನ ಸಾಗರದ ಹೊಸಕೆರೆಯಲ್ಲಿ ಈಜಲು ಹೋಗಿ, ಇಬ್ಬರು ಬಾಲಕರು ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಶಿರೂರು ಆಲಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕರನ್ನು ಆಲಳ್ಳಿ ಮುಳಕೇರಿ ನಿವಾಸಿಯಾದ ಲೇಖನ್ ಮತ್ತು ಅದೇ ಗ್ರಾಮದ ಮತ್ತೊಂದು ಭಾಗದ ನಿವಾಸಿಯಾದ ಪುನೀತ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರ ಸಮ್ಮುಖದಲ್ಲಿ ಶೋಧನಾ ಕಾರ್ಯವನ್ನು ಕೈಗೊಂಡು, ಬಾಲಕರ ಮೃತದೇಹವನ್ನು ಮೇಲಕ್ಕೆ ತಂದು ಬಳಿಕ ಮರಣೋತ್ತರ ಪರೀಕ್ಷೆಗಾಗಿ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳು ಹೊರಗಡೆ ತೆರಳುವ ಸಂದರ್ಭದಲ್ಲಿ ಪೋಷಕರು ನಿರ್ಲಕ್ಷ್ಯಿಸದೆ ಎಚ್ಚರಿಕೆ ವಹಿಸಬೇಕು ಮತ್ತು ಮಕ್ಕಳು ಕೂಡ ಉಡಾಫೆಯಿಂದ ವರ್ತಿಸದೇ ತಮ್ಮ ಮಿತಿಯಲ್ಲೇ ನಡೆದುಕೊಂಡರೆ ಸಂಭವಿಸಬಹುದಾದ ಇಂತಹ ದುರಂತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದಾಗಿದೆ
•ಶೃಂಗೇರಿ: ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು
ಶೃಂಗೇರಿ: ದಸರಾ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆಂದು ಆಗಮಿಸಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ತುಂಗಾ ನದಿಯ ಪಾರ್ಕಿಂಗ್ ಲಾಟ್ ಸಮೀಪದಲ್ಲಿ ನಡೆದಿದೆ. ಶಾರದಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲು ಪೋಷಕರೊಂದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ನದಿಯಲ್ಲಿ ಸ್ನಾನ ಮುಗಿಸಿ ದಡಕ್ಕೆ ಬಂದಿದ್ದು, ಮತ್ತೆ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆಗ ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕನು ನೀರಿನಲ್ಲಿ ಮುಳುಗಿ ಹೋಗುತ್ತಿರುವುದನ್ನು ಗಮನಿಸಿ, ಸ್ಥಳೀಯರಿಂದ ನೆರವನ್ನು ಪಡೆಯಲು ಜೋರಾಗಿ ಕಿರುಚಿಕೊಂಡಿದ್ದಾರೆ. ಆದರೆ, ಸ್ಥಳೀಯರು ನದಿಯ ಬಳಿ ತಲುಪುವುದರ ಒಳಗೆ ಯುವಕ ನೀರಿನಲ್ಲಿ ಮುಳುಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶೃಂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧನಾ ಕಾರ್ಯವನ್ನು ಕೈಗೊಂಡರು. ಜೊತೆಗೆ ಮೃತದೇಹವನ್ನು ಪತ್ತೆ ಹಚ್ಚಲು ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತು. ಸತತ ಕಾರ್ಯಾಚರಣೆಯ ಬಳಿಕ ಯುವಕನ ಮೃತದೇಹವನ್ನು ಪತ್ತೆ ಹಚ್ಚಿ, ದಡಕ್ಕೆ ತಂದು ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಯುವಕನನ್ನು ಕೋಲಾರ ಜಿಲ್ಲೆಯ ಮಾಲೂರು ಮೂಲದ ರಾಘವೇಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಈ ಹಿಂದೆ ಕೂಡ ಕೆಲವರು ಮುಳುಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ದುರಂತಗಳು ಮತ್ತೆ ಸಂಭವಿಸದಂತೆ ತಡೆಗಟ್ಟಲು, ಅಪಾಯಕಾರಿ ಸ್ಥಳದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಅಗತ್ಯವಿದ್ದಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕೊಪ್ಪ: ಅತ್ಯಾಚಾರ ಪ್ರಕರಣ; ಸತೀಶ್ ಪಾತ್ರಿ ಅರೆಸ್ಟ್
ಕೊಪ್ಪ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಸತೀಶ್ ಪಾತ್ರಿಯನ್ನು, ಪೊಲೀಸರು ಬೆಂಗಳೂರಿನ ಜೆ.ಪಿ.ನಗರದಲ್ಲಿ ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಪಾತ್ರಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆಯನ್ನು ಕೈಗೊಂಡಾಗ, ಆತ ಬೆಂಗಳೂರಿನಲ್ಲಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಆತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ ಎನ್ನಲಾಗಿದೆ. ಇದೀಗ ಬೆಂಗಳೂರಿನ ಜೆ.ಪಿ. ನಗರದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪೊಲೀಸ್ ಠಾಣೆಗೆ ಸತೀಶ್ ಪಾತ್ರಿಯನ್ನು ಕರೆತಂದಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಲಭಿಸಿದೆ.
•ಭದ್ರಾವತಿ: ಭೀಕರ ರಸ್ತೆ ಅಪಘಾತ; ಎಳೆದೊಯ್ದ ಕಾರು
ಭದ್ರಾವತಿ: ಬೈಕ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಭಾನುವಾರದಂದು ಉಂಬ್ಳೆಬೈಲು ರಸ್ತೆಯ ಮೂಲೆಕಟ್ಟೆ ಬಳಿ ನಡೆದಿದೆ. ಹೋಮ್ ಗಾರ್ಡ್ ಸಿಬ್ಬಂದಿಗಳಿಬ್ಬರು ಬೈಕ್ ನಲ್ಲಿ ರಾತ್ರಿ ಪಾಳಿಯ ಕರ್ತವ್ಯಕ್ಕೆ ಬೊಮ್ಮನಕಟ್ಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ಸಮೇತ ಹೋಮ್ ಗಾರ್ಡ್ ಸ್ವಲ್ಪ ದೂರದ ತನಕ ಕಾರಿನಿಂದ ಎಳೆದೊಯ್ಯಲ್ಪಟ್ಟಿದ್ದಾರೆ. ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರಿಂದ ಹೋಮ್ ಗಾರ್ಡ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಮೃತ ಸಿಬ್ಬಂದಿಯನ್ನು ಸಂಗಯ್ಯ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಹೋಮ್ ಗಾರ್ಡ್ ಸಿಬ್ಬಂದಿಯಾದ ಮುರಳಿ ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
.







