ಬೆಂಗಳೂರು: ರಾಜ್ಯದ ಹಲವಾರು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸ್ ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಅಸಮರ್ಪಕ ಲೇಬಲಿಂಗ್ ಹೊಂದಿರುವಂತಹ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೇಸಿಗೆ, ಮಳೆ ಮತ್ತು ಚಳಿಗಾಲ ಎನ್ನದೆ ವರ್ಷವಿಡಿ ತಮ್ಮ ನೆಚ್ಚಿನ ಐಸ್ ಕ್ರೀಮ್ ಅನ್ನು ಸವಿಯುವಂತಹ ಐಸ್ ಕ್ರೀಮ್ ಪ್ರಿಯರನ್ನು ಆತಂಕಕ್ಕೆ ಒಳಪಡಿಸುವಂತಹ ಸಂಗತಿಯೊಂದು ಹೊರಬಿದ್ದಿದೆ.
ಆರೋಗ್ಯ ಸಚಿವರ ಸೂಚನೆಯ ಮೇರೆಗೆ ಅಧಿಕಾರಿಗಳು ಸುಮಾರು 45ಕ್ಕೂ ಹೆಚ್ಚು ಐಸ್ ಕ್ರೀಮ್ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತನಿಖೆಯನ್ನು ಕೈಗೊಂಡಂತಹ ಸಮಯದಲ್ಲಿ ಅವಧಿ ಮೀರಿದ ಕಚ್ಚಾವಸ್ತುಗಳು, ತಯಾರಿಕಾ ಸ್ಥಳಗಳಲ್ಲಿ ನೈರ್ಮಲ್ಯದ ಕೊರತೆ, ಪರವಾನಿಗೆ ರಹಿತವಾಗಿ ಅಕ್ರಮವಾಗಿ ಉತ್ಪಾದನೆ ಮಾಡುತ್ತಿರುವಂತಹ ವಿಚಾರಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆರೋಗ್ಯವನ್ನು ನಿರ್ಲಕ್ಷಿಸಿ ನಿಯಮ ಮೀರಿದ ಘಟಕಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ದಾಳಿಗಳು ನಿರಂತರವಾಗಿ ಮುಂದುವರಿಯಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಗ್ರಾಹಕರು ಐಸ್ ಕ್ರೀಮ್ ಮತ್ತು ಇತರ ಸಂಸ್ಕರಿಸಿದ ಆಹಾರದ ಉತ್ಪನ್ನಗಳನ್ನು ಖರೀದಿಸುವಂತಹ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಖರೀದಿಸುವ ಸಂದರ್ಭದಲ್ಲಿ ತಯಾರಿಕೆಯ ದಿನಾಂಕ, ಮುಕ್ತಾಯದ ದಿನಾಂಕ, ಪ್ಯಾಕ್ ಸೀಲ್ ಮತ್ತು ಸೂಕ್ತ ಲೇಬಲ್ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಕೊಂಡುಕೊಳ್ಳಬೇಕೆನ್ನುವಂತಹ ಎಚ್ಚರಿಕೆಯನ್ನು ಸಹ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಸಾರ್ವಜನಿಕರಿಗೆ ನೀಡಿದೆ.







