ಉಡುಪಿ/ದಕ್ಷಿಣ ಕನ್ನಡ: ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪಟ್ಟಿ ಇದೀಗ ಪ್ರಕಟಗೊಂಡಿದ್ದು ಉಡುಪಿ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಿಶನ್ ಕುಮಾರ್ ಹೆಗ್ಡೆ ಕೊಳ್ಕೆಬೈಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರು ನೇಮಕಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು ಎನ್ನಲಾಗಿದೆ. ಅಲ್ಲದೆ ಉಡುಪಿ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠಗೊಳಿಸಬೇಕಿದೆ. ಇದರ ಜೊತೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪಕ್ಷ ಕಳೆದುಕೊಂಡಿರುವಂತಹ ಅಧಿಕಾರವನ್ನು ಮರಳಿ ಪಡೆದುಕೊಳ್ಳುವ ಸವಾಲು ಅಧ್ಯಕ್ಷ ಸ್ಥಾನದೊಂದಿಗೆ ಹೆಗಲೇರಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಯುವ ನಾಯಕತ್ವ!
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ 40ಕ್ಕೂ ಹೆಚ್ಚು ಆಕಾಂಕ್ಷೆಗಳು ಅರ್ಜಿಯನ್ನು ಸಲ್ಲಿಸಿದ್ದು, ಜೂನ್ 29ರಿಂದ ಆಗಸ್ಟ್ 12ರವರೆಗೆ ಅಭಿಪ್ರಾಯ ಸಂಗ್ರಹಣಾ ಪ್ರಕ್ರಿಯೆ ನಡೆದಿತ್ತು. ಈ ಪ್ರಕ್ರಿಯೆಗೆ ಎಐಸಿಸಿ ವೀಕ್ಷಕರಾಗಿ ಕೋಝಿಕೋಡ್ ನ ಶಾಸಕರಾದ ಜಯಂತ್ ಅವರನ್ನು ನೇಮಿಸಲಾಗಿತ್ತು. ಇವರೊಂದಿಗೆ ರಾಜ್ಯದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರೆ ವೆರೋನಿಕಾ ಕಾರ್ನೆಲಿಯೋ, ಪಕ್ಷದ ಮುಖಂಡರಾದ ಸತೀಶ್, ಶ್ರೀನಿವಾಸ್ ನಾಲ್ವರನ್ನೊಳಗೊಂಡ ಸಮಿತಿಯು ಜಿಲ್ಲೆಯಾದ್ಯಂತ ಸಂಚರಿಸಿ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಆಗಸ್ಟ್ 12ರವರೆಗೆ ಅಭ್ಯರ್ಥಿಗಳ ಅರ್ಜಿಗಳು, ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು, ಬಳಿಕ ಎಐಸಿಸಿ ಗೆ ಅಂತಿಮ ವರದಿಯನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಎಐಸಿಸಿ ಪದಾಧಿಕಾರಿಗಳು, ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಚರ್ಚೆಯನ್ನು ನಡೆಸಿ ದಕ್ಷಿಣಕನ್ನಡದ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದೆ.







