ತೀರ್ಥಹಳ್ಳಿ ಸಹ್ಯಾದ್ರಿ ಶಾಲೆಗೆ ರಾಜ್ಯಕ್ಕೆ 9ನೇ ರ್ಯಾಂಕ್!
– 625ಕ್ಕೆ 617 ಅಂಕ ಪಡೆದ ಸಾಯಿಶ್ರೇಷ್ಠ ಸಾಧನೆ
– ಪಿಯುಸಿಯಲ್ಲೂ 4 ರ್ಯಾಂಕ್ ಪಡೆದಿದ್ದ ಶಿಕ್ಷಣ ಸಂಸ್ಥೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿನ ತನ್ನ ಸಾಧನೆಯನ್ನು ಮುಂದುವರಿಸಿದೆ. ಶಾಲೆಯ ವಿದ್ಯಾರ್ಥಿನಿ ಸಾಯಿಶ್ರೇಷ್ಠ 625ಕ್ಕೆ 617 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಒಂಭತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಆ ಮೂಲಕ ತಾನು ವ್ಯಾಸಂಗ ಮಾಡಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾಳೆ.
ಸಾಯಿಶ್ರೇಷ್ಠ ಮೇಳಿಗೆ ಸಮೀಪದ ಕೂದೂರು ಗ್ರಾಮದ ಕೆ.ಎಸ್.ದಿವ್ಯ ಹಾಗೂ ವಿ.ವಿ.ಶಿವಯ್ಯ ದಂಪತಿಗಳ ಸುಪುತ್ರಿಯಾಗಿದ್ದು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಣ ಸಂಸ್ಥೆಯ ಜೊತೆಗೆ ಪೋಷಕರಿಗೂ ಹೆಮ್ಮೆಯನ್ನುಂಟು ಮಾಡಿದ್ದಾಳೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಕಳೆದ ಕೆಲವು ದಿನಗಳ ಹಿಂದೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲೂ ರಾಜ್ಯಮಟ್ಟದಲ್ಲಿ ನಾಲ್ಕು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಂಡಿತ್ತು. ಇದೀಗ ಎಸ್ಎಸ್ಎಲ್ ಸಿ ಫಲಿತಾಂಶದಲ್ಲೂ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಯಶಸ್ಸು ಕಂಡಿದೆ. ಇದರಿಂದಾಗಿ ತೀರ್ಥಹಳ್ಳಿ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಪಡೆದುಕೊಂಡಂತಾಗಿದೆ








