ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಸರಣಿ ಅಪಘಾತ; ಬೈಕ್ ಸವಾರರಿಗೆ ಗಾಯ
• ಬೈಂದೂರು: ಅಂತರರಾಜ್ಯ ಕಳ್ಳನ ಬಂಧನ
• ಬ್ರಹ್ಮಾವರ: ಅಕ್ರಮ ಮರಳುಗಾರಿಕೆ; ಲೋಕಾಯುಕ್ತ ತನಿಖೆ
• ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳು ಭಸ್ಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ಸರಣಿ ಅಪಘಾತ; ಬೈಕ್ ಸವಾರರಿಗೆ ಗಾಯ
ಪುತ್ತೂರು: ಬೈಕ್ ಮತ್ತು ಕಾರುಗಳ ನಡುವೆ ಸರಣಿ ಅಪಘಾತ ಎದುರಾದ ಘಟನೆ, ಭಾನುವಾರದಂದು ಮುಕ್ರಂಪಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಬಳಿ ನಡೆದಿದೆ. ಪುತ್ತೂರಿನಿಂದ ಸುಳ್ಯದ ಕಡೆಗೆ ಸಾಗುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಎರಡೂ ಕಾರುಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣ ಮೆಡಿಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಬೈಂದೂರು: ಅಂತರರಾಜ್ಯ ಕಳ್ಳನ ಬಂಧನ
ಬೈಂದೂರು: ಹಲವು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿದ ಘಟನೆ ನಡೆದಿದೆ. ಪಡುವರಿ ಗ್ರಾಮದ ಗುರುಕಿರಣ್ ಪಟ್ವಾಲ್ ಎನ್ನುವವರ ಮನೆಯೊಳಗೆ ನುಗ್ಗಿದ್ದ ಆರೋಪಿಯು, ಒಟ್ಟು 22 ಗ್ರಾಂ ತೂಕದ ಸುಮಾರು 2.81 ಲಕ್ಷಗಳಷ್ಟು ಬೆಲೆಬಾಳುವ ಚಿನ್ನಾಭರಣ ಕಳುವು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಕಾಪು ಮಲ್ಲಾರುವಿನ ಉಮೇಶ್ ಬಳೆಗಾರ ಎಂದು ಗುರುತಿಸಲಾಗಿದೆ. ಉಮೇಶ್ ಬಳೆಗಾರ ವಿರುದ್ಧ ಕರ್ನಾಟಕ ಸೇರಿದಂತೆ ತಮಿಳುನಾಡು ಕೇರಳ ರಾಜ್ಯಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 8 ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಯಾಗಿದ್ದು, ಉಳಿದ 23 ಪ್ರಕರಣಗಳ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
• ಬ್ರಹ್ಮಾವರ: ಅಕ್ರಮ ಮರಳುಗಾರಿಕೆ; ಲೋಕಾಯುಕ್ತ ತನಿಖೆ
ಬ್ರಹ್ಮಾವರ: ಬಾರ್ಕೂರು ಸಮೀಪದ ಹೊಸಳ ಗ್ರಾಮದ ನಾಗರಮಠದಲ್ಲಿರುವ ಸೀತಾ ನದಿಯಲ್ಲಿ ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಮರಳುಗಾರಿಕೆ ನಡೆಸುತ್ತಿರುವ ಕುರಿತು ಗ್ರಾಮಸ್ಥರು, ರೈತರು ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ವಿಭಾಗದ ಎಸ್ ಪಿ ದಿನೇಶ್ ಕುಮಾರ್ ಅವರ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡವು ಭೇಟಿ ನೀಡಿತು. ಸ್ಥಳೀಯರು ಮಾಡಿರುವ ಆರೋಪವನ್ನು ಪರಿಶೀಲಿಸುವ ಸಲುವಾಗಿ ಸ್ಥಳಕ್ಕೆ ಆಗಮಿಸಿದ ತಂಡವು ಎರಡು ದಿನಗಳ ಕಾಲ ಕ್ಷೇತ್ರ ಪರಿಶೀಲನೆಯನ್ನು ನಡೆಸಿತು. ಬಳಿಕ ದಾಖಲೆಗಳ ಹೆಚ್ಚಿನ ಪರಿಶೀಲನೆ ಮತ್ತು ಮಾಹಿತಿ ಸಂಗ್ರಹಣೆಗಾಗಿ ಶುಕ್ರವಾರದಂದು ಪುನಃ ಆಗಮಿಸಿದ್ದರು. ಪರಿಣಾಮವಾಗಿ ಶನಿವಾರದಂದು ಮರಳು ಸಾಗಿಸುವ ನೂರಾರು ಟ್ರಕ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಕಳೆದೆರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರಿಗೆ ಸಮಾಧಾನವನ್ನುಂಟು ಮಾಡಿದೆ.
ಗಣಿಗಾರಿಕೆಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದ ಸ್ಥಳೀಯರಿಂದ ಮತ್ತು ಸಂತ್ರಸ್ತರಿಂದ ಲೋಕಾಯುಕ್ತ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಮೀಟರ್ ಆಳದವರೆಗೆ ಮರಳನ್ನು ಹೊರತೆಗೆಯಲು ಅನುಮತಿಯನ್ನು ನೀಡಲಾಗಿದ್ದರೂ ಸಹ, ಕಾರ್ಮಿಕರು ಮೂರರಿಂದ ನಾಲ್ಕು ಮೀಟರ್ ನಷ್ಟು ಆಳದವರೆಗೆ ಡ್ರೈವ್ ಮಾಡುತ್ತಿರುವುದು ಕಂಡುಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ಇದರ ಪರಿಣಾಮದಿಂದಾಗಿ ಹತ್ತಿರದಲ್ಲಿರುವ ಬಾವಿಗಳ ಅಂತರ್ಜಲವು ಉಪ್ಪುನೀರಾಗಿ ಪರಿವರ್ತನೆ ಹೊಂದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಟಿಪ್ಪರ್ ಲಾರಿಗಳು ಆರು ಟನ್ ನಷ್ಟು ಮರಳನ್ನು ಸಾಗಿಸುತ್ತಿದ್ದು, ಟ್ರಿಪ್ ಶೀಟ್ ನಲ್ಲಿ ಕೇವಲ ಮೂರು ಟನ್ ಗಳಷ್ಟು ಮಾತ್ರ ಮರಳನ್ನು ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ಮಹಿಳೆಯರು ತಮ್ಮ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
• ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳು ಭಸ್ಮ
ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ದೊಡ್ಡ ಮಟ್ಟದ ಅವಘಡ ಸಂಭವಿಸಿರುವ ಘಟನೆ, ಭಾನುವಾರದಂದು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ. ಪರಿಣಾಮವಾಗಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಎಲ್ಲೆಡೆ ಹೋಗೆ ವ್ಯಾಪಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಹರಸಾಹಸ ಪಡುವಂತಾಯಿತು ಎನ್ನಲಾಗಿದೆ.







