ಸಮಸ್ಯೆಗೆ ದನಿ ಕೊಟ್ಟು ಗೆದ್ದ
ಹೊಸನಗರ ಹುಡುಗ ಪ್ರಭು ವಾರಂಬಳ್ಳಿ
– ನೆಟ್ವರ್ಕ್ ಹೋರಾಟದ ಮೂಲಕ ಮೋದಿಗೂ ಸವಾಲು
– ಮಲೆನಾಡ ಆಚರಣೆ, ಪದ್ಧತಿ, ಜನ ಜೀವನದ ಪರಿಚಯದ ಕೆಲಸ
ಎಲೆಮರೆಯ ಕಾಯಿಯಂತಿದ್ದರೂ, ಕನ್ನಡನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದ ಸಾವಿರಾರು ಜನ ಇಂದು ನಮ್ಮೆದುರು ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಪ್ರಭು ವಾರಂಬಳ್ಳಿ ಎನ್ನುವ ಯುವಕ ಕೂಡ ಒಬ್ಬರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಾರಂಬಳ್ಳಿ ಎಂಬ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಇದೀಗ ತಮ್ಮ ಊರಿನ ಅನೇಕ ಸೌಲಭ್ಯವನ್ನು ತನ್ಮ ದನಿ ಮೂಲಕವೇ ತರಿಸಿಕೊಂಡಾತ.
ಒಳ್ಳೆ ಲೇಖಕ ಕೂಡ ಹೌದು.
ಹೊಸನಗರ ತಾಲ್ಲೂಕಿನ ವಾರಂಬಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ 1996ರ ಆಗಸ್ಟ್ 12ರಂದು ನಾಗೇಶ್ ಪ್ರಭು ಮತ್ತು ಜಯಂತಿ ನಾಗೇಶ್ ಪ್ರಭು ಅವರ ಪುತ್ರರಾಗಿ ಜನಿಸಿದರು. ಸಹೋದರ ವೆಂಕಟೇಶ್ ಪ್ರಭು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬಿಕಾಂ ಪದವೀಧರರಾದ ವಿನಾಯಕ ಅವರು ಬರವಣಿಗೆಯ ಆಸಕ್ತಿಯನ್ನೂ ಹೊಂದಿದ್ದಾರೆ. ಇವರ ಲೇಖನಗಳು ವಿಕ್ರಮ, ಕಾರಣಗಿರಿ ಕಲಾದರ್ಶನ ಸೇರಿದಂತೆ ಅನೇಕ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಮಲೆನಾಡ ಆಚರಣೆ ಬಗ್ಗೆ ವಿಶೇಷ ದನಿ
ಹೊಸನಗರ ತಾಲ್ಲೂಕಿನ ಇತಿಹಾಸವನ್ನು ಒಳಗೊಂಡ ‘ನಮ್ಮೂರ ಕಣಜ’ ಎನ್ನುವ ಹೊತ್ತಿಗೆಯಲ್ಲಿ ಇವರು ‘ತಾಲ್ಲೂಕಿನ ಸಾರಿಗೆ ವ್ಯವಸ್ಥೆ’ ಕುರಿತು ಲೇಖನವನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಯೂಟ್ಯೂಬ್, ಇನ್ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಲೆನಾಡಿನ ದೈನಂದಿನ ಬದುಕಿನ ಛಾಯಾಚಿತ್ರ, ಮಲೆನಾಡಿನ ಆಚರಣೆ, ಸಂಪ್ರದಾಯ, ಪುರಾತನ ದೇವಾಲಯಗಳನ್ನು ಶೋಧಿಸಿ, ಅವುಗಳ ಕುರಿತು ವೀಡಿಯೋಗಳ ಮೂಲಕ ಜನರಿಗೆ ಮಾಹಿತಿ ನೀಡಿ ಹಲವಾರು ಚಂದಾದಾರರನ್ನು, ಅನುಯಾಯಿಗಳನ್ನು ಹೊಂದಿದ್ದಾರೆ.
ಪ್ರಧಾನಿ ಕಚೇರಿ ಮುಟ್ಟಿಸಿದ ನೆಟ್ವರ್ಕ್ ಬೇಕು ಹೋರಾಟ!
ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿನಾಯಕ ಅವರ ಸಮಾಜಮುಖಿ ಚಟುವಟಿಕೆಗೆ ‘ನೆಟ್ವರ್ಕ್ ಬೇಕು’ ಹೋರಾಟ ಕೈಗನ್ನಡಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ನೆಟ್ವರ್ಕ್ ಸಂಬಂಧಿ ಹೋರಾಟ ಆರಂಭಗೊಂಡಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಾರಂಬಳ್ಳಿಯಲ್ಲಿ. ಅಂದರೆ ವಿನಾಯಕ ಪ್ರಭು ಅವರ ಹುಟ್ಟೂರಿನಲ್ಲಿ. 2017ರಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ನೆಟ್ವರ್ಕ್ ಸಮಸ್ಯೆ ಕುರಿತು ಪತ್ರ ಬರೆಯುವ ಮುಖಾಂತರ ತನ್ನೂರಿಗೆ ತನ್ನಿಂದ ಕಿಂಚಿತ್ತು ಸೇವೆ ಸಲ್ಲಿಕೆಯಾಗಬೇಕೆಂದು ಪಣತೊಟ್ಟರು.
ಕೂಡಲೆ ಅವರಿಗೆ ಸ್ಪಂದನೆ ದೊರಕಲಿಲ್ಲ. ಆದರೆ ವಿನಾಯಕ ಅವರು ಛಲಬಿಡದ ತ್ರಿವಿಕ್ರಮನಂತೆ ಸತತವಾಗಿ ಹದಿನಾಲ್ಕು ಬಾರಿ ಪ್ರಧಾನಿಗಳಿಗೆ ಹಾಗೂ ಅಂದಿನ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರು. ಅಂತಿಮವಾಗಿ 2025ರಲ್ಲಿ ‘ನೆಟ್ಟಗಿಲ್ಲದ ನೆಟ್ವರ್ಕಿಗಾಗಿ ನಮ್ಮ ಹೋರಾಟ’ ಎಂಬ ಘೋಷಣೆಯೊಂದಿಗೆ ವಾರಂಬಳ್ಳಿಯಿಂದ ಹೊಸನಗರದವರೆಗೆ ಸ್ಥಳೀಯರೊಂದಿಗೆ ಪಾದಯಾತ್ರೆ ನಡೆಸುವ ಮೂಲಕ ತಮ್ಮ ಹಠ ಸಾಧಿಸಿ, ತಮ್ಮ ಊರಿಗೆ ನೆಟ್ವರ್ಕ್ ಕಲ್ಪಿಸಿಕೊಟ್ಟರು. ಈ ಹೋರಾಟದ ಕುರಿತು ಅನೇಕ ರಾಷ್ಟ್ರೀಯ ಸುದ್ಧಿ ವಾಹಿನಿಗಳು, ಇಂಗ್ಲಿಷ್ ಪತ್ರಿಕೆಗಳು, ರಾಜ್ಯದ ಪ್ರಮುಖ ಸುದ್ಧಿ ವಾಹಿನಿಗಳು ಸಂದರ್ಶನ ನಡೆಸಿದವು.
ತಮ್ಮ ಊರ ಜನರಿಗೆ ಕೈಯಲ್ಲಾದ ಸೇವೆ..!
ವಿನಾಯಕ ಅವರು ಊರಿಗೆ ರಸ್ತೆ ಬೇಕು ಎನ್ನುವ ಮತ್ತೊಂದು ಹೋರಾಟವನ್ನೂ ಸಹ ನಡೆಸಿದ್ದಾರೆ. ಕೋವಿಡ್ ಸಮಯದಲ್ಲಿ ಗ್ರಾಮ ಪಂಚಾಯಿತಿಗೆ ‘ಕರೋನಾ ಸೈನಿಕ’ ಎಂಬ ಹೆಸರಿನಲ್ಲಿ ಸ್ವಯಂ ಸೇವಕರಾಗಿ ಮಾತ್ರೆ ಔಷಧಿಗಳನ್ನು ಪ್ರತಿನಿತ್ಯ ಪಡೆಯುವ ಪರಿಸ್ಥಿತಿಯಲ್ಲಿರುವವರಿಗೆ ಅವುಗಳನ್ನು ತಲುಪಿಸುವುದು ಮತ್ತು ಅಸೌಖ್ಯಕ್ಕೆ ಒಳಗಾದವರಿಗೆ ಕೋವಿಡ್ ಬಾಧಿಸದಂತೆ ತುರ್ತು ಚಿಕಿತ್ಸೆ ಕೊಡಿಸಲು, ಆಸ್ಪತ್ರೆಗೆ ದಾಖಲಿಸುವುದು ಮೊದಲಾದ ಸೇವೆಗಳನ್ನು ಸಲ್ಲಿಸಿದರು.
ಇವುಗಳೊಂದಿಗೆ ಪರಿಚಯಸ್ಥ ದಾನಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸಮವಸ್ತ್ರ ನೋಟ್ ಪುಸ್ತಕ ಬ್ಯಾಗ್ ವಿತರಣೆ, ಸ್ಥಳೀಯರ ಸಹಕಾರದಿಂದ ವಾರಂಬಳ್ಳಿಯ ಕಲ್ಯಾಣೇಶ್ವರ ದೇವಾಲಯದ ಜೀರ್ಣೋದ್ಧಾರ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ದೇಶವನ್ನು ಕಾಯುವ ಯೋಧರಿಗೆ ದೇವಾಲಯದ ಪ್ರಸಾದ ಕಳುಹಿಸುವುದು ಇನ್ನೂ ಹತ್ತು ಹಲವು ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಸಮಾಜ ಪರ ಕಾಳಜಿ ಹೊಂದಿರುವ ಯುವ ಜನತೆಯೇ ದೇಶದ ಆಸ್ತಿ. ಸೋಷಿಯಲ್ ಮೀಡಿಯಾದಲ್ಲಿ prabhu vaaramballi ಎಂದು ಹುಡುಕಿ ಅವರಿಗೊಂದು ಥ್ಯಾಂಕ್ಸ್ ಹೇಳಿ.








