ಟಾಪ್ 3 ನ್ಯೂಸ್ ಕರ್ನಾಟಕ
ಮಗಳ ಮೇಲೆ ಕಣ್ಣು ಹಾಕಿದವನ ಕೊಂದ ತಂದೆ!
– ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರ!
– ಮಕ್ಕಳ ಬಗ್ಗೆ ಹುಷಾರು: ವಿದ್ಯುತ್ ಶಾಕ್ ಗೆ ಬಾಲಕಿ ಬಲಿ!
ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ವ್ಯಕ್ತಿಯನ್ನು, ಆಕೆಯ ತಂದೆಯೇ ಹತ್ಯೆ ಮಾಡಿದ ಪ್ರಕರಣವು ಬೆಂಗಳೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಗಳ ಸುರಕ್ಷತೆಗಾಗಿ ತಂದೆಯೊಬ್ಬನು ಕಾನೂನನ್ನು ಕೈಗೆತ್ತಿಕೊಂಡ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಬಾಗಲಕೋಟೆ ಮೂಲದ ರಮೇಶ್ ಎಂಬಾತ ದುಬೈನಿಂದ ವಾಪಸ್ಸಾದ ಬಳಿಕ ತನ್ನ ಸಂಬಂಧಿಕರ ಅಪ್ರಾಪ್ತ ಮಗಳ ಮೇಲೆ ಕಣ್ಣಿಟ್ಟಿದ್ದನೆಂಬ ಆರೋಪ ಕೇಳಿಬಂದಿದೆ. “ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ಆಕೆಯನ್ನು ನಿರಂತರವಾಗಿ ಕಾಡುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ, ರಮೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತ ಜೈಲಿಗೂ ಹೋಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.
ಜೈಲಿನಿಂದ ಹೊರಬಂದ ಬಳಿಕವೂ ತನ್ನ ವರ್ತನೆಯನ್ನು ಬದಲಿಸದ ರಮೇಶ್, ಮತ್ತೆ ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಈರಯ್ಯ, ತನ್ನ ಸಂಬಂಧಿಕರಾದ ಚಿನ್ನಯ್ಯ, ಚೇತನ್ ಮತ್ತು ಚರಣ್ ಜೊತೆಗೂಡಿ ಕಠಿಣ ನಿರ್ಧಾರಕ್ಕೆ ಬಂದಿದ್ದಾನೆ. ಆರೋಪಿಗಳು ರಮೇಶ್ನನ್ನು ಸ್ನೇಹಪೂರ್ವಕವಾಗಿ ಊಟಕ್ಕೆ ಆಹ್ವಾನಿಸಿದ್ದಾರೆ. ಬಳಿಕ ಮದ್ಯಪಾನ ಮಾಡಿಸಿದ ನಂತರ, ಅವನು ಅಮಲಿನಲ್ಲಿದ್ದಾಗ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಯಲಹಂಕದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು.
ರಾಜಕಾಲುವೆಯಲ್ಲಿ ಶವ ಪತ್ತೆಯಾದ ನಂತರ ಯಲಹಂಕ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ತಂದೆ ಸೇರಿದಂತೆ ನಾಲ್ವರು ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆ. “ಮಗಳ ರಕ್ಷಣೆಗಾಗಿ ತಂದೆ ಮಾಡಿದ ಈ ಕ್ರಮ ಸರಿಯೇ? ಅಥವಾ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪೇ?” ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಘಟನೆ ನ್ಯಾಯ, ಕಾನೂನು ಮತ್ತು ಭಾವನೆಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ.
ಚಿಕ್ಕೋಡಿ: ವಿದ್ಯುತ್ ಶಾಕ್ ಗೆ ಬಾಲಕಿ ಬಲಿ!
ಚಿಕ್ಕೋಡಿ: ವಿದ್ಯುತ್ ತಗುಲಿ 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ, ಮಂಗಳವಾರ ಸಂಜೆ ಇಂಗಳಿ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ , ವಿದ್ಯುತ್ ತಂತಿಯ ಮೇಲೆ ಸ್ಕಿಪ್ಪಿಂಗ್ ಹಗ್ಗ ಬಿದ್ದಿರುವುದನ್ನು ಕಂಡು, ಅದನ್ನು ತೆಗೆದುಕೊಳ್ಳಲೆಂದು ಮೇಲೆ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ದುರ್ಘಟನೆ ನಡೆದಿದೆ. ಪರಿಣಾಮವಾಗಿ ಬಾಲಕಿಯು ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಮೃತ ಬಾಲಕಿಯನ್ನು ಇಂಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾನ್ವಿ ಕಾಂಬಳೆ ಎಂದು ಗುರುತಿಸಲಾಗಿದೆ. ಆಘಾತಕ್ಕೆ ಒಳಗಾದ ತಕ್ಷಣ ಸಾನ್ವಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರ!
ಚಿಕ್ಕಮಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮನೆ ಮುಂದೆ ವಾಮಾಚಾರ ನಡೆದಿದೆ. ಎಸಿಎಫ್ ಜೀಪ್ ಡ್ರೈವರ್ ಮೇಲೂ ವಾಮಾಚಾರ ಪ್ರಯೋಗವಾಗಿದ್ದು, ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ ನಡೆದಿದೆ. ಎಸಿಎಫ್ ಮೋಹನ್ ಹಾಗೂ ಅವರ ಜೀಪ್ ಚಾಲಕ ಮೇಲೆ ಪ್ರಯೋಗ ಮಾಡಲಾಗಿದೆ. ಮನೆಯ ಗೇಟ್ ಬಳಿ ಎಸಿಎಫ್ ಮೋಹನ್, ಜೀಪ್ ಚಾಲಕನ ಫೋಟೋ ಇಟ್ಟು ವಾಮಾಚಾರ ಮಾಡಿದ್ದು ಮಣ್ಣಿನ ಮಡಕೆಯೊಳಗೆ ಇಬ್ಬರ ಫೋಟೋ ಇಟ್ಟು, ಅರಿಶಿನ-ಕುಕುಂಕುಮ ಹಾಕಿ ಮಡಕೆ ಒಡೆದ ಕಿಡಿಗೇಡಿಗಳ ನಡೆ ಅಚ್ಚರಿ ಮೂಡಿಸಿದೆ. ಕಚೇರಿಯ ಸಿಬ್ಬಂದಿ ಮೇಲೆ ಅನುಮಾನ ಎಂದು ಎಸಿಎಫ್ ದೂರಿನಡಿ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.








