ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
• ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ; ಪೊಲೀಸರ ವಶಕ್ಕೆ
• ಬ್ರಹ್ಮಾವರ: ಮನೆಗೆಲಸಕ್ಕೆ ಬಂದಿದ್ದ ಮಹಿಳೆಯಿಂದ ಚಿನ್ನಾಭರಣ ಕಳುವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಪುತ್ತೂರು: ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಸೋಮವಾರ ಬೆಳಿಗ್ಗೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅನಿತೋಟ ನಿವಾಸಿ ಹರಿದಾಸ ಎಂದು ಗುರುತಿಸಲಾಗಿದೆ. ಹರಿದಾಸ ಅವರು ಭಾನುವಾರದಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಸೋಮವಾರ ಬೆಳಿಗ್ಗೆ ಮನೆಯವರು ನೋಡಿದಾಗ ಅವರು ಮನೆಯಲ್ಲಿರದೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಹರಿದಾಸ ಮನೆಯವರು ಸುತ್ತಮುತ್ತಲೂ ಹುಡುಕಾಟ ನಡೆಸಿದಾಗ 20ಮೀಟರ್ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
• ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ; ಪೊಲೀಸರ ವಶಕ್ಕೆ
ಬೆಳ್ತಂಗಡಿ: ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ವೇಣೂರು ಠಾಣೆಯ ಪೊಲೀಸರು ಪಿಎಸ್ಐ ಓಮನಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಘಟನೆ, ನಿಟ್ಟಡೆ ಗ್ರಾಮದ ಬರ್ಕಜೆಯ ಬಳಿ ನಡೆದಿದೆ. ನೌಶದ್ ಮತ್ತು ಸದಾಶಿವ ಎನ್ನುವ ಇಬ್ಬರು ವ್ಯಕ್ತಿಗಳು ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು, ಅದನ್ನು ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಮನೆಯ ಕೆಲಸಕ್ಕೆಂದು ಆಗಮಿಸಿದ ಮಹಿಳೆಯೊಬ್ಬರು ಚಿನ್ನಾಭರಣ ಕಳುವು ಮಾಡಿರುವ ಘಟನೆ, ಹೇರೂರು ಗ್ರಾಮದಲ್ಲಿ ನಡೆದಿದೆ. ಲತಾ ಎನ್ನುವ ಮಹಿಳೆಯು ಹೇರೂರು ಗ್ರಾಮದಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬರನ್ನು ನೋಡಿಕೊಳ್ಳಲು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಲತಾ ಮನೆಯಲ್ಲಿದ್ದ 29 ಗ್ರಾಂ ತೂಕದ ಸುಮಾರು 3.5ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣವನ್ನು ಕಳುವು ಮಾಡಿ, ಅದನ್ನು ಅಡವಿಟ್ಟಿರುವ ಕುರಿತು ಮಾಹಿತಿ ಲಭಿಸಿದೆ. ಚಿನ್ನವನ್ನು ಬಿಡಿಸಿಕೊಡುವುದಾಗಿ ನಂಬಿಸಿ, ಈ ರೀತಿಯ ಕೃತ್ಯವನ್ನು ಎಸಗಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಶಾ ಪೂಜಾರಿ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







