ದಕ್ಷ ಪೊಲೀಸ್ ಅಧಿಕಾರಿ ಕಾಶಿಗೆ ಬೀಳ್ಕೊಡುಗೆ ಸಂಭ್ರಮ!
– ತೀರ್ಥಹಳ್ಳಿ ಮೂಲದ ಹೆಮ್ಮೆಯ ಪೊಲೀಸ್ ಅಧಿಕಾರಿ
– ವಕೀಲರಾಗಿ ಮತ್ತೆ ಸೇವೆ ಮಾಡಲು ಸಿದ್ಧತೆ
ತೀರ್ಥಹಳ್ಳಿ/ ಬೆಂಗಳೂರು: ತೀರ್ಥಹಳ್ಳಿ ಮೂಲದ ಪೊಲೀಸ್ ಅಧಿಕಾರಿ ಎಸ್ಪಿ ಎಸ್ಎಸ್ ಕಾಶಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯಿಂದ ಹಾಗೂ ಸಿಬ್ಬಂದಿ ಮತ್ತು ಅವರ ಆತ್ಮೀಯರು ಬೀಳ್ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ತಾಜ್ ವಿವಾಂತ ಹೋಟೆಲ್ನಲ್ಲಿ ಏಪ್ರಿಲ್ 30 ರಂದು ಕಾಶಿ ಅವರ ಸ್ನೇಹಿತರು, ಹಿತೈಷಿಗಳು ಪುಟ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಬ್ಇನ್ಸ್ಪೆಕ್ಟರ್ ಆಗಿ ಇಲಾಖೆಗೆ ಕಾಲಿಟ್ಟ ಕಾಶಿ ಎಸ್ಪಿ ಹಂತಕ್ಕೆ ಬೆಳೆದರಾದರೂ, ಐಪಿಎಸ್ ಲಾಬಿಯ ಎದೆ ಒಡ್ಡಿಕೊಂಡೇ ಇಲಾಖೆಯೊಳಗೆ ಒಗ್ಗಿಕೊಂಡವರು. ಕಳೆದ ಒಂದೂವರೆ ದಶಕಗಳ ಕಾಲ, ಸರಕಾರಗಳು ಬದಲಾದರೂ ಕಾಶಿ ಅವರ ಕಾರ್ಯಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ.
ನಡುವೆ ರಾಜೀನಾಮೆಯನ್ನು ನೀಡುವ ಮೂಲಕ ಸುದ್ದಿಯಾದರೂ, ಅಂತಿಮವಾಗಿ; ಯಾವುದೇ ಅಡೆತಡೆಗಳಿಲ್ಲದೆ ನಾನ್ ಎಗ್ಸೆಕೆಟಿವ್ ಹುದ್ದೆಯಲ್ಲೇ ನಿವೃತ್ತರಾದರು. ಅದರ ನೆಪದಲ್ಲಿ ಹಮ್ಮಿಕೊಂಡ ಖಾಸಗಿ ಕಾರ್ಯಕ್ರಮದ ಉದ್ದಕ್ಕೂ ಇಲಾಖೆಯ ಒಳಗೆ ಕಾಶಿ ನಡೆಸಿದ ಹೋರಾಟಗಳ ಕತೆಯನ್ನು ಮೆಲುಕು ಹಾಕಲಾಯಿತು. ಕಾಶಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಆಶಾಕಿರಣವೂ ಅಗಿದ್ದಾರೆ ಎಂಬುದನ್ನು ‘ಸೆಂಡ್ ಆಫ್’ ಕೋರಿ ಮಾತನಾಡಿದ ಬಹುತೇಕರು ನಿರೂಪಿಸಿದರು. ವಿ. ಮುರಳೀಧರ್, ನಿವೃತ್ತ ಅಧಿಕಾರಿ ಕೆ. ಎನ್. ನಾರಾಯಣ ಸ್ವಾಮಿ ಸೇರಿದಂತೆ ಎಲ್ಲರೂ ಕಾಶಿ ಅವರ ಸೇವೆ ಕೊಂಡಾಡಿದರು. ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದು ಕಾಶಿ ಅವರು ರಾಯಚೂರು ಜಿಲ್ಲೆಯಲ್ಲಿ ನಡೆದ ನಕ್ಸಲ್ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಕೀಲರಾಗಿ ಮತ್ತೆ ಸೇವೆಗೆ…
“ಇಲಾಖೆಯ ನನ್ನ ಸಹಜೀವಿಗಳಿಗೆ ಕಾನೂನು ನೆರವು ನೀಡುವ ಕೆಲಸ ಮಾಡುತ್ತೇವೆ,’’ ಎಂದು ತಮ್ಮ ನಿವೃತ್ತ ಜೀವನದ ಯೋಜನೆಯನ್ನು ಮುಂದಿಟ್ಟ ಕಾಶಿ, ಇತ್ತೀಚಿಗೆ ಕಾನೂನು ಪದವಿಯನ್ನೂ ಮುಗಿಸಿದ್ದಾರೆ.








