ಶಾಲಾ-ಕಾಲೇಜುಗಳಲ್ಲಿ ಅಶ್ಲೀಲ ನೃತ್ಯಕ್ಕೆ ಬ್ರೇಕ್!
– ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಯಮ ಮೀರಂಗಿಲ್ಲ
– ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರಿಗೆ ಜವಾಬ್ದಾರಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ವೇದಿಕೆಗಳು ಸಿನಿಮಾಗಳ ಐಟಂ ಡ್ಯಾನ್ಸ್, ದ್ವಂದ್ವಾರ್ಥದ ಹಾಗೂ ಅಶ್ಲೀಲ ಹಾಡುಗಳ ಪ್ರದರ್ಶನದ ತಾಣವಾಗಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ಎಳೆಯ ಮನಸ್ಸಿನ ಮೇಲೆ ಇದು ಬೀರುವ ನಕಾರಾತ್ಮಕ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು, ಇದೀಗ ಇಂತಹ ಅಸಭ್ಯ ಪ್ರದರ್ಶನಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ ಶಾಲಾ, ಕಾಲೇಜು ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿ ಈ ಬಗ್ಗೆ ಸೂಚನೆ ನೀಡಲಾಗಿದೆ.
ಇದು ಕೇವಲ ಒಂದು ಆಡಳಿತಾತ್ಮಕ ನಿಯಮವಲ್ಲ, ಬದಲಾಗಿ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಟ್ಟಿರುವ ಅತ್ಯಂತ ಸಂವೇದನಾಶೀಲ ಹೆಜ್ಜೆ ಎಂದು ಸರ್ಕಾರ ಹೇಳಿದೆ. ಶಾಲೆಗಳು ಕೇವಲ ಅಕ್ಷರ ಕಲಿಸುವ ಕೇಂದ್ರಗಳಲ್ಲ; ಅವು ಸಂಸ್ಕಾರ, ನೈತಿಕತೆ ಹಾಗೂ ಉನ್ನತ ವ್ಯಕ್ತಿತ್ವ ವಿಕಸನದ ದೇಗುಲಗಳು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಲ್ಸ್ ಮತ್ತು ಟ್ರೆಂಡಿಂಗ್ ಹಾಡುಗಳ ಪ್ರಭಾವದಿಂದ ಮಕ್ಕಳು ಬೇಗನೆ ಆಕರ್ಷಿತರಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಾವು ನೋಡುವುದನ್ನೇ ಸರಿಯೆಂದು ನಂಬಿ ಅನುಕರಿಸಲು ಪ್ರಯತ್ನಿಸುತ್ತಾರೆ. ಅಶ್ಲೀಲ ನೃತ್ಯಗಳು ಮಕ್ಕಳ ಮುಗ್ಧತೆಯನ್ನು ಕಸಿದುಕೊಳ್ಳುವುದಲ್ಲದೆ, ಅವರಲ್ಲಿ ಮಹಿಳೆಯರ ಮತ್ತು ಕಲೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತವೆ.
ಶಿಕ್ಷಣ ಇಲಾಖೆಯ ಈ ನಡೆಯು, ಮಕ್ಕಳನ್ನು ಇಂತಹ ಸಾಂಸ್ಕೃತಿಕ ಮಾಲಿನ್ಯದಿಂದ ಪಾರುಮಾಡಿ, ಅವರಲ್ಲಿ ಕಲೆಯ ಬಗೆಗಿನ ನೈಜ ಸೌಂದರ್ಯಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಆದೇಶದ ಅರ್ಥ ಶಾಲಾ ವಾತಾವರಣದಿಂದ ಮನರಂಜನೆಯನ್ನೇ ಕಿತ್ತುಕೊಳ್ಳುವುದಲ್ಲ; ಬದಲಾಗಿ ‘ಸಂಸ್ಕೃತಿಯೊಂದಿಗೆ ಮನರಂಜನೆ’ಗೆ ಒತ್ತು ನೀಡುವುದಾಗಿದೆ. ನಮ್ಮ ನಾಡಿನಲ್ಲಿ ಯಕ್ಷಗಾನ, ಜಾನಪದ, ಶಾಸ್ತ್ರೀಯ ನೃತ್ಯಗಳು, ಮೌಲ್ಯಾಧಾರಿತ ಗೀತೆಗಳು ಹಾಗೂ ನಾಟಕಗಳ ದೊಡ್ಡ ಪರಂಪರೆಯೇ ಇದೆ. ಇವುಗಳನ್ನು ವೇದಿಕೆಯ ಮೇಲೆ ತರುವುದರಿಂದ ಮಕ್ಕಳಲ್ಲಿ ತಮ್ಮ ಬೇರುಗಳ ಬಗ್ಗೆ ಹೆಮ್ಮೆ ಮೂಡುತ್ತದೆ ಹಾಗೂ ಅವರ ಸೃಜನಶೀಲತೆಗೆ ಒತ್ತು ಸಿಗುತ್ತದೆ. ಕೇವಲ ಕ್ಷಣಿಕ ಚಪ್ಪಾಳೆಗಾಗಿ ಅಸಭ್ಯವಾಗಿ ಕುಣಿಯುವ ಬದಲು, ಕೌಶಲ್ಯಪೂರ್ಣವಾಗಿ ಪ್ರತಿಭೆಯನ್ನು ಪ್ರದರ್ಶಿಸಲು ಇದು ನಾಂದಿಯಾಗಲಿದೆ.
ಶಿಕ್ಷಣ ಇಲಾಖೆಯ ಈ ಆದೇಶ ಕೇವಲ ಕಾಗದದಲ್ಲಿ ಉಳಿಯಬಾರದು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಇದನ್ನು ಜವಾಬ್ದಾರಿಯಿಂದ ಒಪ್ಪಿಕೊಂಡು ಜಾರಿಗೊಳಿಸಬೇಕು. ಕಲೆಯೆಂದರೆ ಕೇವಲ ದೇಹದ ಪ್ರದರ್ಶನವಲ್ಲ, ಅದು ಅಂತಃಕರಣದ ಶುದ್ಧ ಅಭಿವ್ಯಕ್ತಿ ಎಂಬುದನ್ನು ಮಕ್ಕಳಿಗೆ ಪ್ರೀತಿಯಿಂದ ಅರ್ಥೈಸಬೇಕಾಗಿದೆ. ಶಾಲಾ ವೇದಿಕೆಗಳು ಮತ್ತೊಮ್ಮೆ ಶುದ್ಧ ಕಲೆ, ನೈಜ ಸಂಸ್ಕೃತಿ ಹಾಗೂ ಆರೋಗ್ಯಕರ ಮನರಂಜನೆಯ ತಾಣಗಳಾಗಿ ಅರಳಲಿ ಎಂಬುದು ಈ ಆದೇಶದ ಉದ್ದೇಶವಾಗಿದೆ.








